ಅಮೃತ್ಸರ: ಪಂಜಾಬ್ನ ಅಮೃತ್ಸರದ ಗೋಲ್ಡನ್ ಟೆಂಪಲ್ ಪ್ರವೇಶದ್ವಾರದ ಮುಂದೆ ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್ ಮೇಲೆ ಗುಂಡು ಹಾರಿಸುವ ಯತ್ನ ನಡೆಸಲಾಗಿದ್ದು, ಶಿರೋಮಣಿ ಅಕಾಲಿ ದಳದ ನಾಯಕ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಅಲ್ಲಿದ್ದ ಜನರು ತಕ್ಷಣಕ್ಕೆ ಕೃತ್ಯ ಎಸಗಿದ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಮಾಜಿ ಡಿಸಿಎಂ ಆಗಿರುವ ಸುಖಬೀರ್ ಸಿಂಗ್ ಸದ್ಯ ಗೋಲ್ಡನ್ ಟೆಂಪಲ್ ಎದುರು ಪ್ರವೇಶ ದ್ವಾರ ಕಾಯುವ ಶಿಕ್ಷೆಗೆ ಗುರಿಯಾಗಿದ್ದಾರೆ. ಈ ವೇಳೆ ಬುಧವಾರ ಈ ಕೊಲೆ ಯತ್ನ ನಡೆಸಲಾಗಿದೆ.
ವೀಲ್ ಚೇರ್ನಲ್ಲಿ ನೀಲಿ ಬಣ್ಣದ ಸೇವಾದಾರ್ ಯುನಿಫಾರ್ಮ್ನಲ್ಲಿ ಈಟಿ ಹಿಡಿದ ಸುಖಬೀರ್ ಸಿಂಗ್ ಬಾದಲ್ ತಮ್ಮ ಕರ್ತವ್ಯ ನಿರ್ವಹಿಸುವಾಗ ಗುಂಡಿನ ದಾಳಿಗೆ ಯತ್ನ ನಡೆಸಿರುವ ವಿಡಿಯೋ ಹರಿದಾಡಿದೆ. ಗುಂಡಿನ ಸದ್ದು ಕೇಳುತ್ತಿದ್ದಂತೆ ತಕ್ಷಣಕ್ಕೆ ಅಧಿಕಾರಿಗಳು ರಕ್ಷಣಾ ಕ್ರಮಕ್ಕೆ ಆಗಮಿಸಿ, ಗುಂಡಿನ ದಾಳಿ ನಡೆಸಿದ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ನರೇನ್ ಸಿಂಗ್ ಚೌರಾ ಎಂಬ ಉಗ್ರ ಈ ಹಲ್ಲೆ ಯತ್ನ ನಡೆಸಿದ್ದ ಎಂಬುದು ಬೆಳಕಿಗೆ ಬಂದಿದೆ. ಈತ ಅನೇಕ ಪ್ರಕರಣದಲ್ಲಿ ಬೇಕಾದ ಪ್ರಮುಖ ಆರೋಪಿಯಾಗಿದ್ದಾನೆ.
ಘಟನೆ ವೇಳೆ ಸುಖಬೀರ್ ಬಾದಲ್ ಅವರ ಬಳಿ ಬಂದ ಚೌರ ಗುಂಡಿನ ದಾಳಿಗೆ ಮುಂದಾದ ಈ ವೇಳೆ ತಕ್ಷಣಕ್ಕೆ ಜಾಗೃತನಾದ ಸುಖಬೀರ್ ಪಕ್ಕ ನಿಂತಿದ್ದ ಮತ್ತೊಬ್ಬ ಸೇವಾದಾರ ಆತನನ್ನು ತಳ್ಳಿ, ಅಕಾಲಿದಳದ ನಾಯಕನನ್ನು ರಕ್ಷಿಸಿದ್ದಾರೆ.
2007 ರಿಂದ 2017ರ ಸರ್ಕಾರ ಅವಧಿಯಲ್ಲಿ ನಡೆಸಿದ ತಪ್ಪುಗಳಿಗಾಗಿ ಅಕಾಲ್ ತಖ್ತ್ ಜತೇದಾರ್ ಗಿಯಾನಿ ರಘ್ಬೀರ್ ಸಿಂಗ್ ಅವರು ಸುಖಬೀರ್ ಬಾದಲ್ ಸೇರಿದಂತೆ ಇತರ ಅಕಾಲಿ ನಾಯಕರಿಗೆ ಗೋಲ್ಡನ್ ಟೆಂಪಲ್ನಲ್ಲಿ ಸೇವೆ ಸಲ್ಲಿಸುವ ಧಾರ್ಮಿಕ ಶಿಕ್ಷೆಗೆ ಗುರಿಯಾಗಿಸಿದ್ದಾರೆ.
ಇದನ್ನೂ ಓದಿ: ಇಂದು ಸಂಭಾಲ್ಗೆ ವಿಪಕ್ಷ ನಾಯಕ ರಾಹುಲ್ ಗಾಂಧಿ; ಕಾರ್ಯಕರ್ತರಿಂದ ಬೃಹತ್ ಬೆಂಬಲ
ಘಟನೆ ಬಗ್ಗೆ ನಾಯಕ ದಲ್ಜಿತ್ ಸಿಂಗ್ ಚೀಮಾ ಹೇಳಿದ್ದೇನು?: ಶಿರೋಮಣಿ ಅಕಾಲಿ ದಳದ ಹಿರಿಯ ನಾಯಕ ದಲ್ಜಿತ್ ಸಿಂಗ್ ಚೀಮಾ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಬುಲೆಟ್ ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದರಿಂದ ಬಾದಲ್ ಅಪಾಯದಿಂದ ಪಾರಾಗಿದ್ದಾರೆ. ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಹೊಣೆ ಹೊತ್ತು ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ನ್ಯಾಯಾಂಗ ತನಿಖೆಗೆ ಆಗ್ರಹ: ಈ ಘಟನೆಯ ಬಗ್ಗೆ ನ್ಯಾಯಾಂಗ ತನಿಖೆ ನಡೆಯಬೇಕು. ನಾರಾಯಣ್ ಸಿಂಗ್ ಚೋಡಾ ಅವರು ಸುಖ್ಬೀರ್ ಬಾದಲ್ ಮೇಲೆ ಗುಂಡು ಹಾರಿಸಲು ಎಲ್ಲ ಪ್ರಯತ್ನಗಳನ್ನು ಮಾಡಿದರು. ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ನಾರಾಯಣ್ ಚೋಡಾನನ್ನು ನಿಯಂತ್ರಿಸದಿದ್ದರೆ, ಬಾದಲ್ ಕಥೆ ಮುಗಿಯುತ್ತಿತ್ತು ಎಂದು ಚೀಮಾ ಹೇಳಿದರು.
ಆರೋಪಿ ಬಬ್ಬರ್ ಖಾಲ್ಸಾ ಜೊತೆ ಸಂಬಂಧ ಇರುವ ಶಂಕೆ: ಭದ್ರತಾ ಸಂಸ್ಥೆಯ ಮೂಲಗಳ ಪ್ರಕಾರ, ನರೇನ್ ಸಿಂಗ್ ಅವರು ಖಲಿಸ್ತಾನಿ ಭಯೋತ್ಪಾದಕ ಗುಂಪು ಬಬ್ಬರ್ ಖಾಲ್ಸಾ ಜೊತೆ ಸಂಪರ್ಕ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. 94 ಅಡಿ ಸುರಂಗವನ್ನು ಅಗೆದು ನಾಲ್ವರು ಕೈದಿಗಳು ಜೈಲಿನಿಂದ ತಪ್ಪಿಸಿಕೊಂಡ 2004 ರ ಬುರೈಲ್ ಜೈಲ್ ಬ್ರೇಕ್ ಪ್ರಕರಣದ ಮಾಸ್ಟರ್ ಮೈಂಡ್ ಸಹಾಯ ಮಾಡಿದ್ದ ಎಂದು ಇವರನ್ನು ಪರಿಗಣಿಸಲಾಗಿದೆ.
ಇದನ್ನೂ ಓದಿ: ನೋಯ್ಡಾ ಗಡಿಯಲ್ಲಿ ರೈತರ ಪ್ರತಿಭಟನೆ; ಸಮಸ್ಯೆ ಆಲಿಸಲು ಐವರು ಸದಸ್ಯರ ಸಮಿತಿ ರಚಿಸಿದ ಯುಪಿ ಸರ್ಕಾರ