ಲಖನೌ, ಉತ್ತರಪ್ರದೇಶ: ಹಿಂಸಾಚಾರ ಪೀಡಿತ ಉತ್ತರ ಪ್ರದೇಶದ ಸಂಭಾಲ್ಗೆ ಇಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆ ಅವರಿಗೆ ಬೆಂಬಲ ನೀಡಲು ಕಾರ್ಯಕರ್ತರು ಪಕ್ಷದ ಮುಖ್ಯ ಕಚೇರಿಯಲ್ಲಿ ಜಮಾಯಿಸಿದ್ದಾರೆ. ಉತ್ತರ ಪ್ರದೇಶದ ಗಡಿಯಲ್ಲಿ ನಾಯಕರ ಸ್ವಾಗತಕ್ಕೆ ಕಾರ್ಯಕರ್ತರು ರ‍್ಯಾಲಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿರುವ ಕಾಂಗ್ರೆಸ್ ಕಾರ್ಯಕರ್ತ ಇತ್ರಾತ್ ಹುಸೇನ್ ಬಾಬರ್, ನಮ್ಮ ನಾಯಕರು ಎಲ್ಲಿಯೇ ಹೋದರು ಅಲ್ಲಿ ಪ್ರೀತಿ ಮತ್ತು ಭಾತೃತ್ವವನ್ನು ಹರಡುತ್ತಾರೆ. ಅವರು ನಮಗೆ ಯಾವಾಗಲೂ ಪ್ರೀತಿ ಅಂಗಡಿಯ ಮಾರ್ಗದರ್ಶನ ನೀಡಿದ್ದು, ಶಾಂತಿ ಮತ್ತು ಸಹಬಾಳ್ವೆಯ ಮಹತ್ವ ತಿಳಿಸಿದ್ದಾರೆ. ಹಿಂದೂ ಮತ್ತು ಮುಸ್ಲಿಮರು ಒಗ್ಗಟ್ಟಿನಿಂದ ಬದುಕಬೇಕು. ಇತ್ತೀಚೆಗೆ ಇಲ್ಲಿ ನಡೆದ ಘಟನೆಯೂ ಖಂಡನಾರ್ಹ. ಅದರಲ್ಲೂ ವಿಶೇಷವಾಗಿ ಜನರ ಮತ್ತು ಪೊಲೀಸರ ಎರಡೂ ಕ್ರಮವೂ ಖಂಡನಾರ್ಹವಾಗಿದೆ ಎಂದರು.
ಸಂಭಾಲ್ಗೆ ತೆರಳಲಿರುವ ರಾಹುಲ್ ಗಾಂಧಿ ಅವರು ಅಲ್ಲಿನ ಪರಿಸ್ಥಿತಿ ಪರಿಶೀಲಿಸಲಿದ್ದಾರೆ. ನಾವು ನಮ್ಮ ನಾಯಕನ್ನು ಸ್ವಾಗತಿಸಿ, ಅವರಿಗೆ ಜೊತೆಯಾಗಲಿದ್ದೇವೆ ಎಂದು ಸರ್ದಾರ್ ಬಲ್ಬೀರ್ ಸಿಂಗ್ ಹೇಳಿದರು. ಈ ಸಂಪೂರ್ಣ ಪ್ರಯತ್ನದಲ್ಲಿ ನಾವು ರಾಹುಲ್ ಗಾಂಧಿ ಜೊತೆ ನಿಲ್ಲುತ್ತೇವೆ. ಆಡಳಿತವೂ ನಮ್ಮ ಧ್ವನಿಯನ್ನು ಆಲಿಸುತ್ತದೆ ಎಂಬ ಭರವಸೆ ಇದೆ ಎಂದರು.
ಈ ಘಟನೆ ಪೊಲೀಸರು ಮತ್ತು ಮಸೀದಿಯ ವಿಷಯವಾಗಿದೆಯೇ ಹೊರತು ಹಿಂದೂ - ಮುಸ್ಲಿಂ ಸಂಘರ್ಷವಲ್ಲ. ರಾಹುಲ್ ಗಾಂಧಿ ಶಾಂತಿ ಮತ್ತು ಭಾತೃತ್ವ ವನ್ನು ಪಸರಿಸುವ ಉದ್ದೇಶದಿಂದ ಭೇಟಿ ನೀಡಲಿದ್ದಾರೆ ಎಂದು ಇತ್ರಾತ್ ಹುಸೇನ್ ಬಾಬರ್ ಸ್ಪಷ್ಟಪಡಿಸಿದ್ದಾರೆ.
ಬಿಗಿ ಭದ್ರತೆ: ಈ ನಡುವೆ ಕಾಂಗ್ರೆಸ್ ಕಾರ್ಯಕರ್ತರು ದೆಹಲಿ ಉತ್ತರ ಪ್ರದೇಶದ ಗಡಿ ಭಾಗ ಗಾಜಿಪುರ್ ಗಡಿಯಲ್ಲಿ ಒಟ್ಟಾಗಿದ್ದು, ರಾಹುಲ್ ಗಾಂಧಿಗೆ ಬೆಂಬಲ ನೀಡಿ. ಘೋಷಣೆ ಕೂಗಿದರು. ಈ ವೇಳೆ, ಎಲ್ಲಾ ಭದ್ರತಾ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಎಸಿಪಿ ಇಂದಿರಾಪುರಂ ಸ್ವತಂತ್ರ ಕುಮಾರ್ ಸಿಂಗ್ ತಿಳಿಸಿದರು. ಮುನ್ನೆಚ್ಚರಿಕಾ ಕ್ರಮವಾಗಿ ಭದ್ರತೆ ಕೈಗೊಳ್ಳಲಾಗಿದೆ. ಮೇಲಧಿಕಾರಿಗಳ ನಿರ್ದೇಶನದಂತೆ ನಾವು ಎಲ್ಲಾ ಸೂಚನೆಗಳನ್ನು ಅನುಸರಿಸುತ್ತೇವೆ ಎಂದು ಭದ್ರತೆಗೆ ನಿಯೋಜನೆಗೊಂಡಿರುವ ಪೊಲೀಸರು ತಿಳಿಸಿದ್ದಾರೆ.
ನವೆಂಬರ್ 19ರಂದು ಕೋರ್ಟ್ ಅನುಮತಿ ಮೇರೆಗೆ ಮೊಘಲ್ ಕಾಲದ ಇಲ್ಲಿನ ಮಸೀದಿಯಿದ್ದ ಜಾಗದ ಸಮೀಕ್ಷೆಗೆ ಅಧಿಕಾರಿಗಳು ಮುಂದಾದಾಗ ಜಿಲ್ಲೆಯಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಮಸೀದಿ ಕಟ್ಟಿದ ಜಾಗದಲ್ಲಿ ಹಿಂದೆ ದೇವಾಲಯವಿತ್ತು, ಈ ದೇವಾಲಯ ಕೆಡವಿ ಮಸೀದಿ ನಿರ್ಮಿಸಲಾಗಿದೆ ಎಂದು ಹಿಂದೂ ಅರ್ಜಿದಾರರು ಕೋರ್ಟ್ಗೆ ಮನವಿ ಸಲ್ಲಿಸಿದ್ದರು. ಇದರ ಆಧಾರದ ಮೇರೆಗೆ ಕೋರ್ಟ್ ಸಮೀಕ್ಷೆಗೆ ಅನುಮತಿ ನೀಡಿತ್ತು. ನವೆಂಬರ್ 24ರಂದು ಎರಡನೇ ಬಾರಿ ಸಮೀಕ್ಷೆಗೆ ಮುಂದಾದ ಅಧಿಕಾರಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು, ಹಿಂಸಾಚಾರ ನಡೆದಿತ್ತು. ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿ, ಅನೇಕರು ಗಾಯಗೊಂಡಿದ್ದರು.
ಇದನ್ನೂ ಓದಿ: ಒಂದೇ ಕುಟುಂಬದ ಮೂವರನ್ನು ಇರಿದು ಹತ್ಯೆ ಮಾಡಿದ ಅಪರಿಚಿತ: ಬೆಚ್ಚಿ ಬಿದ್ದ ಮಹಾನಗರಿ ಜನ