ಯಾದಗಿರಿ : ಎಪಿಎಂಸಿ ಮತ್ತು ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತ ಪರ ಹಾಗೂ ವಿವಿಧ ಸಂಘಟನೆಗಳು ಕರೆ ನೀಡಿದ ಕರ್ನಾಟಕ ಬಂದ್ಗೆ ಯಾದಗಿರಿ ಜಿಲ್ಲೆಯಲ್ಲಿ ಬಹುತೇಕ ಬೆಂಬಲ ವ್ಯಕ್ತವಾಗಿತ್ತು.
ಬೆಳಗ್ಗೆಯಿಂದಲೇ ಹಲವು ಸಂಘಟನೆಗಳು ಬಂದ್ಗೆ ಬೆಂಬಲ ನೀಡಿ ಪ್ರತಿಭಟಿಸಿದವು. ಕನ್ನಡ ಪರ ಸಂಘಟನೆಗಳು ಬಂದ್ಗೆ ಬೆಂಬಲ ನೀಡಿ ನಗರದ ಸುಭಾಷ್ ಸರ್ಕಲ್ನಲ್ಲಿ ಟೈರ್ಗೆ ಬೆಂಕಿ ಹಚ್ಚುವ ಮೂಲಕ ಆಕ್ರೋಶ ವ್ಯಕ್ತಪಡಿಸಿದವು. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದರು. ನಗರದಲ್ಲಿ ಬಹುತೇಕ ಎಲ್ಲಾ ಅಂಗಡಿ-ಮುಂಗಟ್ಟುಗಳನ್ನು ಸ್ವಯಂ ಪ್ರೇರಿತ ಬಂದ್ ಮಾಡಲಾಗಿತ್ತು.
ನಗರದಲ್ಲಿ ಬೈಕ್ ರ‍್ಯಾಲಿ ಮೂಲಕ ಸಾರ್ವಜನಿಕರಲ್ಲಿ ಬಂದ್ಗೆ ಬೆಂಬಲ ನೀಡುವಂತೆ ಹೋರಾಟಗಾರರು ಮನವಿ ಮಾಡಿದರು. ನಗರದಲ್ಲಿ ಸಾರಿಗೆ ಬಸ್ ಸಂಚಾರ, ಆಟೋ ರಿಕ್ಷಾಗಳ ಓಡಾಟ ಎಂದಿನಂತಿತ್ತು. ಹಲವು ಕಡೆಗಳಲ್ಲಿ ತೆರೆಯಲಾದ ಅಂಗಡಿ-ಮುಂಗಟ್ಟುಗಳನ್ನ ಹೋರಾಟಗಾರರು ಒತ್ತಾಯ ಪೂರ್ವಕಾಗಿ ಬಂದ್ ಮಾಡಿಸಲು ಮುಂದಾದ ಘಟನೆ ನಡೆದವು. ಪ್ರತಿಭಟನೆ ವೇಳೆ ಬಸ್ ಸಂಚಾರಕ್ಕೂ ಕೂಡ ಹೋರಾಟಗಾರರು ವಿರೋಧ ವ್ಯಕ್ತಪಡಿಸಿದರು.
ನಂತರ ನಗರದ ಮೈಲಾಪುರ ಸರ್ಕಲ್ನಲ್ಲಿ ಜಮಾಯಿಸಿದ ಹೋರಾಟಗಾರರು, ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು. ಮಧ್ಯಾಹ್ನದ ವೇಳೆಗೆ ಸುಭಾಷ್ ವೃತ್ತಕ್ಕೆ ತೆರಳಿ ವೃತ್ತದಲ್ಲಿ ಪ್ರತಿಭಟನೆ ನಡೆಸುವ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರದ ನೀತಿ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ರಾಜ್ಯ ಮತ್ತು ಕೇಂದ್ರ ಸರ್ಕಾರ ಕೃಷಿ ಮಸೂದೆ ತಿದ್ದುಪಡಿ ವಾಪಸ್ ಪಡೆಯುವಂತೆ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಿದರು.