ಕಾರವಾರ: ಜನಸಾಮಾನ್ಯರು ವಿದ್ಯುತ್ ಬಿಲ್ಗಳನ್ನು ಎರಡು ತಿಂಗಳು ಬಾಕಿ ಉಳಿಸಿಕೊಳ್ಳುತ್ತಿದ್ದಂತೆ ಮನೆ ಬಾಗಿಲಿಗೆ ಅಧಿಕಾರಿಗಳು ಆಗಮಿಸಿ, ಪವರ್ ಕಟ್ ಮಾಡಿ ತೆರಳುತ್ತಿದ್ದರು. ಆದರೆ ಸರ್ಕಾರಿ ಇಲಾಖೆಗಳು ಎಷ್ಟೇ ಬಿಲ್ ಉಳಿಸಿಕೊಂಡರೂ ಕೇಳುವುದಿಲ್ಲ ಎನ್ನುವ ಆರೋಪಗಳಿದ್ದವು. ಅದರಲ್ಲಿ ಪ್ರಮುಖವಾಗಿ ಬಹುಗ್ರಾಮ ನೀರು ಸರಬರಾಜು ಇಲಾಖೆಯಿಂದ 1.59 ಕೋಟಿ ರೂ., ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಿಂದ 54 ಲಕ್ಷ ರೂ. ಹಾಗೂ ಕೇಂದ್ರ ಸರ್ಕಾರದಡಿ ಬರುವ ಬಿಎಸ್‌ಎನ್‌ಎಲ್ ನಿಂದ 47 ಲಕ್ಷ ರೂ. ಹಾಗೂ ಇತರ ಇಲಾಖೆಗಳು ಸೇರಿ 1.02 ಕೋಟಿ ರೂ. ಪಾವತಿಯಾಗೋದು ಬಾಕಿಯಿದೆ.
ಲಾಕ್ಡೌನ್ನಿಂದ ಆದಾಯದಲ್ಲಿ ಭಾರಿ ನಷ್ಟಕ್ಕೊಳಗಾಗಿದ್ದ, ಹೆಸ್ಕಾಂ ಬಾಕಿ ಉಳಿಸಿಕೊಂಡ ಎಲ್ಲ ಸರ್ಕಾರಿ ಕಚೇರಿಗಳಿಗೂ ಬಿಲ್ ಪಾವತಿಸುವಂತೆ ಸೂಚಿಸಿ ಶಾಕ್ ನೀಡಿದೆ. ಹೆಸ್ಕಾಂ ಅಧಿಕಾರಿಗಳು ಹೇಳುವಂತೆ ಕಳೆದ ಮಾರ್ಚ್ ತಿಂಗಳಿಂದ 7.50 ಕೋಟಿ ರೂ. ಕಲೆಕ್ಷನ್ ಕಡಿಮೆಯಾಗಿದೆ. ಕೊರೊನಾ ಕಾರಣದಿಂದ ಗ್ರಾಹಕರು ಸರಿಯಾಗಿ ಹಣ ತುಂಬದಿರುವುದರಿಂದ ಸುಮಾರು 2.50 ಕೋಟಿ ರೂ. ಕಲೆಕ್ಷನ್ ಕೊರತೆಯಾಗಿದೆ. ಇದರಿಂದ ಹೆಸ್ಕಾಂಗೆ ಸಾಕಷ್ಟು ನಷ್ಟವಾಗಿದೆ. ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ವಿದ್ಯಾರ್ಥಿಗಳಿಗೆ ತೊಂದರೆ ನೀಡಬಾರದೆಂಬ ನಿಟ್ಟಿನಲ್ಲಿ ಇನ್ನಷ್ಟು ಸಮಯಾವಕಾಶ ನೀಡಲಾಗಿದೆ. ಆದರೆ ಹಣ ಪಾವತಿ ಮಾಡದ ಇಲಾಖೆಗಳ ವಿದ್ಯುತ್ ಕನೆಕ್ಷನ್ ಕಟ್ ಮಾಡಲಾಗುತ್ತದೆ. ಜನರು ಹಾಗೂ ಇಲಾಖೆಗಳು ಸರಿಯಾಗಿ ಹಣ ಪಾವತಿಸಿದಾಗ ಮಾತ್ರ ಹೆಸ್ಕಾಂ ಉತ್ತಮ ಸೇವೆ ಒದಗಿಸಬಹುದು ಎನ್ನುತ್ತಾರೆ ಹೆಸ್ಕಾಂ ಎಕ್ಸಿಕ್ಯೂಟಿವ್ ಎಂಜಿನಿಯರ್ ರೋಶನಿ.
ಕಳೆದ ಮೂರು ತಿಂಗಳಿಂದ 35 ಸಾವಿರ ರೂ. ವಿದ್ಯುತ್ ಬಿಲ್ ಬಾಕಿಯಿರಿಸಿದ್ದ, ಕಾರವಾರದ ಆರ್‌ಟಿಓ ಕಚೇರಿಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಮೊದಲ ಶಾಕ್ ನೀಡಿದೆ. ಇದರಿಂದ ಕಳೆದ ನಾಲ್ಕೈದು ದಿನಗಳಿಂದ ಆರ್‌ಟಿಓ ಕೇವಲ ಕಂಪ್ಯೂಟರ್ ಆಪರೇಟರ್‌ಗಳಿಗಾಗಿ ಜನರೇಟರ್ ಬಳಸಿಕೊಂಡು ಕತ್ತಲಲ್ಲಿ ಕೆಲಸ ಮಾಡುತ್ತಿದೆ. ಆರ್‌ಟಿಓ ಕಚೇರಿಯಲ್ಲಿ ಈ ಹಿಂದೆ ಕರ್ತವ್ಯ ನಿರ್ವಹಿಸಿದ್ದ, ವಿಶಾಲ್ ಎಂಬ ಆರ್‌ಟಿಓ ಅಧಿಕಾರಿ ನಿರ್ಲಕ್ಷ್ಯತನದಿಂದ ಬಿಲ್ ಪಾವತಿಯಾಗಿಲ್ಲ ಎನ್ನಲಾಗುತ್ತಿದೆ. ಇದೀಗ ಮಂಗಳೂರು ಮೂಲದ ರಾಮಕೃಷ್ಣ ರೈ ಪ್ರಭಾರ ಆರ್‌ಟಿಓ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಈ ಹಿಂದೆ ಇದ್ದ ವಿಶಾಲ್ ಎಂಬುವವರು ರಾಯಚೂರ ಆರ್ ಟಿಓ ಅಧಿಕಾರಿಯಾಗಿ ಖಾಯಂ ಸೇವೆ ಸಲ್ಲಿಸುತ್ತಿದ್ದಾರೆ.
ಓದಿ:ಗೋಕರ್ಣದಲ್ಲಿ ನಿವೃತ್ತ ಶಿಕ್ಷಕನಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ..
ಆದರೆ ಅವರ ಲಾಗ್ ಇನ್ ಪಾಸ್ ವರ್ಡ್ ಎಲ್ಲವೂ ರಾಯಚೂರಿನಿಂದಲೇ ಆಪರೇಟ್ ಆಗುವುದರಿಂದ ಖಜಾನೆ 2 ರಲ್ಲಿ ಸಮಸ್ಯೆ ಉಂಟಾಗುತ್ತಿದೆ. ಹೀಗಾಗಿ ರಾಯಚೂರು ಆರ್‌ಟಿಓ ಕಚೇರಿಯಿಂದಲೇ ಸಹಿ ಆಗಿ ಬರಬೇಕಾಗಿರುವುದರಿಂದ ಹೆಸ್ಕಾಂಗೆ ಬಿಲ್ ಪಾವತಿ ಆಗದೆ ಉಳಿದಿದೆ ಎನ್ನಲಾಗುತ್ತಿದೆ. ಸದ್ಯ ಆರ್‌ಟಿಓ ಕಚೇರಿಯಲ್ಲಿ ವಿದ್ಯುತ್ ಇಲ್ಲದ ಕಾರಣ ಯಾವುದೇ ಕೆಲಸವಾಗುತ್ತಿಲ್ಲ. ಮೂರ್ನಾಲ್ಕು ದಿನ ಬಂದು ಹೋದರೂ ವಾಹನಗಳ ನೋಂದಣಿಯಾಗುತ್ತಿಲ್ಲ ಎಂದು ಸ್ಥಳೀಯರಾದ ಕಪೀಲ್ ಬಾಂದೇಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.