ತುಮಕೂರು: ಕುಣಿಗಲ್ನ ಕೊತ್ತಗೆರೆಪಾಳ್ಯದ ಶಿವರಾಮ್ ಎಂಬುವರು ವೃತ್ತಿಯಿಂದ ಆಂಬ್ಯುಲೆನ್ಸ್ ಚಾಲಕರು. ಕೋವಿಡ್ ಸಮಯದಲ್ಲಿ ತಮ್ಮ ಪ್ರಾಣ ಪಣಕ್ಕಿಟ್ಟು, ನೂರಾರು ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಕೋವಿಡ್ ಸೋಂಕಿಗೆ ಒಳಗಾಗಿದ್ದ ಪತ್ನಿಯನ್ನು ಜೀವಂತವಾಗಿ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.
ಸೋಂಕಿನಿಂದ ಸತ್ತ ಕೆಲವರ ಶವಗಳತ್ತ ವಾರಸುದಾರರು ತಿರುಗಿ ನೋಡದೇ ಹೋದಾಗ ಆ ಶವಗಳ ಅಂತ್ಯ ಸಂಸ್ಕಾರವನ್ನೂ ಶಿವರಾಮ್ ನೆರವೇರಿಸಿದ್ದರು. ಆದರೆ ವಿಧಿ ಇವರ ಬದುಕಿನಲ್ಲೇ ಆಟವಾಡಿಬಿಟ್ಟಿತು. ಪತ್ನಿ ಲಕ್ಷ್ಮೀದೇವಿ ಸೋಂಕಿನಿಂದ ನರಳಿ ಪ್ರಾಣಬಿಟ್ಟರು.
ಶಿವರಾಮ್ ಮನೆಗೆ ಶಿವಕುಮಾರ್
ಇಂಥ ಮನಕಲಕುವ ವಿಷಯ ಅರಿತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಶಿವರಾಮ್ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ತಮ್ಮ ಅಳಲು ತೋಡಿಕೊಂಡಾಗ ಗದ್ಗದಿತರಾದಾಗ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದರು.
ಸದ್ಯಕ್ಕೆ 10 ಸಾವಿರ ರೂಪಾಯಿ ಸಹಾಯ ನೀಡಿದ್ದಲ್ಲದೇ, ಇನ್ನೂ ಹೆಚ್ಚಿನ ಸಹಕಾರ ನೀಡುವ ಭರವಸೆ ನೀಡಿದ್ದು, ಸಾಂತ್ವನ ಹೇಳಿ, ಮೃತರಿಗೆ ಸಂತಾಪ ಸೂಚಿಸಿದರು.