ರಾಮನಗರ: ಮೈಸೂರು ದಸರಾಗೆ ತೆರಳುವ ಪ್ರವಾಸಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಾಮನಗರ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ವಿನೂತನ ಪ್ರಯೋಗಕ್ಕೆ ಮುಂದಾಗಿದೆ.
ದಸರಾಗೆ ತೆರಳುವ ಪ್ರವಾಸಿಗರಿಗೆ ಒಂದೇ ಕಡೆ ಎಲ್ಲಾ ರೀತಿಯ ತಿಂಡಿ ತಿನಿಸುಗಳು ಹಾಗೂ ವಿವಿಧ ರೀತಿಯ ಭೋಜನಗಳು ಸಿಗುವ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಂಗಳೂರು-ಮೈಸೂರು ಹೆದ್ದಾರಿಯ ಜನಪದ ಲೋಕದಲ್ಲಿ ಸುಮಾರು 20 ಮಳಿಗೆಗಳನ್ನ ತೆರೆಯಲಾಗಿದೆ. ಇಂದು ಅಧಿಕೃತವಾಗಿ ಈ ಆಹಾರ ಮೇಳ ಉದ್ಘಾಟನೆಗೊಳ್ಳಲಿದೆ. ಇಲ್ಲಿ ಸಸ್ಯಹಾರಿ ಮತ್ತು ಮಾಂಸಹಾರಿ ಊಟದ ಸ್ಟಾಲ್ಗಳನ್ನ ತೆರೆದು ಪ್ರವಾಸಿಗರಿಗೆ ಒಂದೇ ಕಡೆ ಬೆಳಗ್ಗೆ ತಿಂಡಿ, ಮದ್ಯಾಹ್ನ ಊಟ, ರಾತ್ರಿ ಊಟ ಸಿಗುವ ಹಾಗೆ ವ್ಯವಸ್ಥೆ ಮಾಡಲಾಗಿದೆ. ಅ.1 ರಿಂದ 10 ರವರೆಗೆ ಈ ಆಹಾರ ಮೇಳ ಆಯೋಜಿಸಲಾಗಿದ್ದು, ಇಲ್ಲಿ ಸ್ಥಳೀಯ ಬಿಡದಿ ತಟ್ಟೆ ಇಡ್ಲಿ, ಜನಾರ್ಧನ ಮೈಸೂರ್ ಪಾಕ್, ಸೊಪ್ಪಿನ ಸಾರು ಮುದ್ದೆ, ನಾಟಿ ಕೋಳಿ ಸಾರು ಸೇರಿದಂತೆ ಹಲವು ದೇಶಿ ಶೈಲಿಯ ಆಹಾರದ ಖಾದ್ಯಗಳನ್ನ ಇಲ್ಲಿ ಪರಿಚಯಿಸಲಿದೆ. ಇದರ ಸದುಪಯೋಗವನ್ನ ಪ್ರವಾಸಿಗರು ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಅರ್ಚನಾ ಎಂ.ಎಸ್ ಮನವಿ ಮಾಡಿದ್ದಾರೆ.
ಈ ಮೇಳಕ್ಕೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಎಲ್ಲಾ ಸಾರ್ವಜನಿಕರು ಮತ್ತು ಪ್ರವಾಸಿಗರು ಸದ್ಬಳಕೆ ಮಾಡಿಕೊಳ್ಳಿ ಎಂದು ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಶಂಕ್ರಪ್ಪ ತಿಳಿಸಿದರು.