ರಾಯಚೂರು: ಸರ್ಕಾರ ಜಿಲ್ಲೆಯಲ್ಲಿ ಅಗತ್ಯಕ್ಕೆ ಅನುಗುಣವಾಗಿ ರ್‍ಯಾಪಿಡ್ ಆ್ಯಂಟಿಜೆನ್ ಕಿಟ್ಗಳನ್ನು ಕಳುಹಿಸುತ್ತಿದೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶ್ ಕುಮಾರ ಹೇಳಿದ್ದಾರೆ.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಈಗಾಗಲೇ ಜಿಲ್ಲೆಗೆ ಸಾವಿರ ರ್‍ಯಾಪಿಡ್ ಆ್ಯಂಟಿಜೆನ್ ಕಿಟ್ ರವಾನಿಸಿದೆ. ಇನ್ನೂ ಹೆಚ್ಚಳವಾಗಿ 3 ಸಾವಿರ ಕಿಟ್ಗಳನ್ನು ರವಾನಿಸುತ್ತಿದೆ. ಇದರಿಂದ ಸೋಂಕಿತರನ್ನು ಶೀಘ್ರವಾಗಿ ಪತ್ತೆ ಹಚ್ಚಲು ಸಹಕಾರಿಯಾಗಲಿದೆ. ಕೊಳಚೆ ಪ್ರದೇಶ ಹಾಗೂ ಹೆಚ್ಚಿನ ಸೋಂಕಿನ ಪ್ರಕರಣಗಳು ಪತ್ತೆಯಾಗಿರುವ ಪ್ರದೇಶದಲ್ಲಿ ಕಿಟ್ಗಳನ್ನು ಬಳಸಿ ಪರೀಕ್ಷೆ ನಡೆಸಲಾಗುವುದು ಎಂದರು.
ರಾಯಚೂರಿನಲ್ಲಿ ಎರಡು ಹಾಗೂ ಲಿಂಗಸುಗೂರು, ಸಿಂಧನೂರು, ಮಾನ್ವಿ, ದೇವದುರ್ಗದಲ್ಲಿ ತಲಾ 100 ಹಾಸಿಗೆ ಸಾಮರ್ಥ್ಯದ ಕ್ವಾರಂಟೈನ್ ಕೇರ್ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಅವಶ್ಯಕತೆ ಇದ್ದಲ್ಲಿ ಅವುಗಳ ಸಂಖ್ಯೆಯನ್ನು ಹೆಚ್ಚಿಸಲು ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕ್ವಾರಂಟೈನ್ ಕೇರ್ಗಳಲ್ಲಿ ರಕ್ತ, ಬಿಪಿ, ಕಿಡ್ನಿ ಸೇರಿದಂತೆ ಹಲವು ಆರೋಗ್ಯ ತಪಾಸಣೆ ನಡೆಸಲು ಮಿನಿ ಲ್ಯಾಬ್ಗಳನ್ನು ತೆರೆಯಲಾಗಿದೆ ಎಂದರು.
ರೋಗ ಲಕ್ಷಣಗಳು ಕಂಡು ಬಂದವರನ್ನು ಒಪೆಕ್ ಆಸ್ಪತ್ರೆಗೆ ದಾಖಲಿಸಲಾಗುವುದು. 50 ವರ್ಷದೊಳಗಿನ ಸೋಂಕಿನ ಲಕ್ಷಣಗಳಿಲ್ಲದವರಿಗೆ ಕೇಂದ್ರಗಳಲ್ಲಿಯೇ ಇರಿಸಲಾಗುತ್ತಿದೆ. ನಗರದಲ್ಲಿ ಹೋಟೆಲ್ ಒಂದರಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಯೊಂದು ಮುಂದೆ ಬಂದಿದೆ. ಸರ್ಕಾರ ನಿಗದಿ ಪಡಿಸಿದ ದರದಂತೆ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗುತ್ತಿದೆ. ಇನ್ನೂ ಎರಡು ಖಾಸಗಿ ಆಸ್ಪತ್ರೆಗಳು ಕೂಡ ಚಿಕಿತ್ಸೆ ನೀಡಲು ಮುಂದೆ ಬಂದಿವೆ ಎಂದರು.
ಅನ್ಲಾಕ್ ಮಾರ್ಗಸೂಚಿ ಪ್ರಕಾರ ರಾತ್ರಿ 9 ರಿಂದ ಬೆಳಗ್ಗೆ 5 ರವರೆಗೆ ನಿರ್ಬಂಧಗಳು ಮುಂದುವರೆಯುತ್ತಿವೆ. ಮುಂಬರುವ ಎರಡು ಭಾನುವಾರ ಸಂಪೂರ್ಣ ಲಾಕ್ಡೌನ್ ಮಾಡಲಾಗುವುದಿಲ್ಲ. ಬಸ್ ಸಂಚಾರ ಇರಲಿದೆ. ಬೇರೆ ಜಿಲ್ಲೆಯಿಂದ ಬಂದವರಿಗೆ 7 ದಿನ ಹಾಗೂ ಹೊರ ರಾಜ್ಯದಿಂದ ಬಂದವರಿಗೆ 14 ದಿನ ಹೋಂ ಕ್ವಾರಂಟೈನ್ಲ್ಲಿರುವಂತೆ ಸೂಚಿಸಲಾಗುತ್ತಿದೆ. ವಾರದ ಹಿಂದೆ ಕಳುಹಿಸಲಾದ ಗಂಟಲು ದ್ರವದ ಮಾದರಿಯ ವರದಿ ಏಕಕಾಲಕ್ಕೆ ಬಂದಿದ್ದರಿಂದ ಇಂದು 135 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಇನ್ನು ಗಂಟಲು ದ್ರವದ ಮಾದರಿ ನೀಡಿದವರು ಹೋಂ ಕ್ವಾರಂಟೈನ್ನಲ್ಲಿದ್ದ ಕಾರಣ ಹೆಚ್ಚಿನ ಸಮಸ್ಯೆಯಾಗಿಲ್ಲ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಶಾಸಕ ಡಾ. ಶಿವರಾಜ ಪಾಟೀಲ, ಆರ್ಡಿಎ ಅಧ್ಯಕ್ಷ ಗೋಪಾಲರೆಡ್ಡಿ, ಜಿ.ಪಂ. ಸಿಇಒ ಲಕ್ಷ್ಮೀಕಾಂತ ರೆಡ್ಡಿ, ಎಸ್ಪಿ ಡಾ. ಸಿ.ಬಿ.ವೇದಮೂರ್ತಿ, ಡಿಎಚ್ಒ ಡಾ. ರಾಮಕೃಷ್ಣ, ಡಾ. ನಾಗರಾಜ ಇದ್ದರು.