ಮೈಸೂರು: ಮೈಸೂರು ದಸರಾದ ಆಹಾರ ಮೇಳದಲ್ಲಿ ನೈಸರ್ಗಿಕವಾಗಿ ಬಿದಿರಿನಲ್ಲಿ ಬಿರಿಯಾನಿ ತಯಾರಿಸುವ ಬಿರಿಯಾನಿಗೆ ಬೇಡಿಕೆ ಹೆಚ್ಚಾಗಿದ್ದು, ಈ ಬಂಬು ಬಿರಿಯಾನಿ ಹೇಗೆ ತಯಾರಿಸುತ್ತಾರೆ ಮತ್ತು ಇದು ನೈಸರ್ಗಿಕವಾಗಿದ್ದು ಆರೋಗ್ಯಕ್ಕೆ ಯಾವ ರೀತಿ ಉಪಯುಕ್ತವಾಗಿದೆ ಎಂಬ ಬಗ್ಗೆ ಆದಿವಾಸಿ ಮುಖಂಡ ಎಂ. ಕೃಷ್ಣಯ್ಯ ಈಟಿವಿ ಭಾರತ್ ಗೆ ವಿಶೇಷವಾಗಿ ವಿವರಿಸಿದ್ದು ಹೀಗೆ.
ಮೈಸೂರು ದಸರಾದ ಆಹಾರ ಮೇಳದಲ್ಲಿ ಹುಣಸೂರು ತಾಲೂಕಿನ ನಾಗರಹೊಳೆ ಅಭಯಾರಣ್ಯದ ಕಾಡಂಚಿನ ಗ್ರಾಮಗಳಲ್ಲಿ ವಾಸ ಮಾಡುವ ಆದಿವಾಸಿ ಸಮುದಾಯದ ಜನರು ಆಹಾರ ಮೇಳದಲ್ಲಿ ಬಿದಿರಿನಿಂದ ತಯಾರಿಸುವ ಬಂಬು ಬಿರಿಯಾನಿ ಪರಿಚಯಿಸಿದರು. ಹಿಂದೆ ಆದಿವಾಸಿಗಳು ಇರಲಿಲ್ಲ. ಆ ಸಂದರ್ಭದಲ್ಲಿ ಬಿದಿರುಗಳನ್ನೇ ಇಟ್ಟುಕೊಂಡು ಆಹಾರ ತಯಾರಿಸುತ್ತಿದ್ದರು. ಅದೇ ರೀತಿ ಆಧುನಿಕ ಕಾಲದಲ್ಲೂ ನೈಸರ್ಗಿಕವಾಗಿ ಬಿದಿರಿನಿಂದ ತಯಾರು ಮಾಡುವ ಬಿರಿಯಾನಿ ದಸರಾ ಆಹಾರ ಮೇಳದಲ್ಲಿ ಆಕರ್ಷಣೆಯಾಗಿದೆ.
ತಯಾರಿಕೆ ಹೇಗೆ : ಹಸಿರಾದ ಬಿದಿರು ತೆಗೆದು ಅದನ್ನು ಸ್ವಚ್ಛಗೊಳಿಸಿ ಅದರೊಳಗೆ ಬಿರಿಯಾನಿಗೆ ಬಳಸುವ ವಸ್ತುಗಳನ್ನು ತುಂಬಿ ಮೇಲ್ಭಾಗದಲ್ಲಿ ಮುತ್ತುಗದ ಎಲೆಯನ್ನಿಟ್ಟು ಅದನ್ನು ಭದ್ರಗೊಳಿಸಿ ಬೆಂಕಿಗೆ ಇಟ್ಟು ಬೇಯಿಸುತ್ತಾರೆ. ಸುಮಾರು 35 ನಿಮಿಷಗಳ ಕಾಲ ಬೆಂಕಿಯಲ್ಲಿ ಬೇಯಿಸಿದ ನಂತರ ಅದನ್ನು ಹೊರ ತೆಗೆದು ಬಿದಿರು ತಣ್ಣಗೆ ಮಾಡಿ, ಬಿದಿರನ್ನು ಎರಡು ಭಾಗಗಳಾಗಿ ವಿಂಗಡಿಸಿದರೆ ಆಗ ಸ್ವಾದಿಷ್ಟವಾದ ನೈಸರ್ಗಿಕ ಬಿದಿರಿನ ಬಿರಿಯಾನಿಯನ್ನು ಆದಿವಾಸಿ ಜನರ ರುಚಿಯಲ್ಲಿ ಜನರು ಸವಿಯಬಹುದಾಗಿದೆ.
ಬಿದಿರಿನ ಬಿರಿಯಾನಿ ಜೊತೆ ಏಡಿ ಸಾಂಬಾರ್, ಮಕಳಿ ಬೇರಿನ ಟೀ, ಬಿದಿರಕ್ಕಿ ಪಾಯಸ, ಗಿಡ ಮೂಲಿಕೆ ಸೊಪ್ಪುಗಳನ್ನು ನೀಡುವ ಮೂಲಕ ದಸರಾ ಆಹಾರ ಮೇಳದಲ್ಲಿ ನಗರದ ಜನರಿಗೆ ಆದಿವಾಸಿ ರೂಪದ ಆಹಾರ ನೀಡಲಾಗುತ್ತಿದೆ.
ಇದನ್ನೂ ಓದಿ : ವಿಶ್ವ ಪ್ರವಾಸೋದ್ಯಮ ಜಾಥಾಕ್ಕೆ ಚಾಲನೆ ನೀಡಿದ ಸಚಿವ ಎಸ್ ಟಿ ಸೋಮಶೇಖರ್: ವಿಡಿಯೋ