ಕಲಬುರಗಿ: ನೆಟೆ ರೋಗದಿಂದ ಹಾನಿಯಾದ ತೊಗರಿಗೆ ವೈಜ್ಞಾನಿಕ ಪರಿಹಾರ ಒದಗಿಸಲು ಆಗ್ರಹಿಸಿ ನಾಳೆ ಕರ್ನಾಟಕ ಪ್ರಾಂತ ರೈತ ಸಂಘ ನೇತೃತ್ವದಲ್ಲಿ ಕಲಬುರಗಿ ನಗರ ಬಂದ್ಗೆ ಕರೆ ನೀಡಲಾಗಿದೆ. ಹಾನಿಯಾದ ತೊಗರಿಗೆ ವೈಜ್ಞಾನಿಕ ಪರಿಹಾರ ಮತ್ತು ಬೆಳೆ ವಿಮೆ ಜಾರಿಗಾಗಿ ಹಲವು ಬಾರಿ ಮನವಿ ಮಾಡಿದರೂ ಸರ್ಕಾರ ಕಿವಿಗೊಡದ ಹಿನ್ನೆಲೆ ನಾಳೆ ಕಲಬುರಗಿ ನಗರ ಬಂದ್ಗೆ ಕರೆ ನೀಡಲಾಗಿದೆ ಎಂದು ಕೆಪಿಆರ್‌ಎಸ್ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ತಿಳಿಸಿದ್ದಾರೆ.
ಬೆಳಗ್ಗೆ 5 ಗಂಟೆಯಿಂದ 11 ಘಂಟೆವರೆಗೆ ಕೇಂದ್ರಿಯ ಬಸ್ ನಿಲ್ದಾಣ ಎದುರು ಬಸ್ ಸಂಚಾರ ತಡೆದು ಪ್ರತಿಭಟಿಸಲಾಗುವದು, ಬಳಿಕ ಎಲ್ಲಾ ಹಳ್ಳಿಯ ರೈತರು ಆಗಮಿಸಿದ ಮೇಲೆ 11 ಗಂಟೆಗೆ ಬಸ್ ನಿಲ್ದಾಣದಿಂದ ರೈತರು ಮೆರವಣಿಗೆ ಹೊರಟು ಸೂಪರ್ ಮಾರ್ಕೆಟ್ ಅಟೋ ಸ್ಟ್ಯಾಂಡ್ ಹತ್ತಿರ ಬಹಿರಂಗ ಸಭೆ ನಡೆಸಲಾಗುವುದು. ಬಂದ್ಗೆ ಅನೇಕ ರೈತಪರ, ದಲಿತಪರ, ವ್ಯಾಪಾರಸ್ಥರು, ಪ್ರಗತಿಪರರು ಸೇರಿದಂತೆ ಅನೇಕರು ಬೆಂಬಲ ಸೂಚಿಸಿದ್ದಾರೆ ಎಂದು ಶರಣಬಸಪ್ಪ ಮಮಶೆಟ್ಟಿ ತಿಳಿಸಿದ್ದಾರೆ.
ಮಾತು ಮರೆತ ಪ್ರಧಾನಿ ಮೋದಿ: ಕೋಲಿ ಸಮಾಜ ಎಸ್ಟಿ ಪಂಗಡಕ್ಕೆ ಸೇರ್ಪಡೆ ಮಾಡುವದಾಗಿ 2019ರಲ್ಲಿ ಪ್ರಧಾನಿ ಮೋದಿ ನೀಡಿದ ಭರವಸೆ ಇಲ್ಲಿವರೆಗೆ ಈಡೇರಿಸಿಲ್ಲ ಎಂದು ನಗರದ ಪತ್ರಿಕಾ ಭವನದಲ್ಲಿ ಕೊಲಿ ಸಮಾಜದ ಮುಖಂಡ ಲಚ್ಚಪ್ಪ ಜಮಾದಾರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಕೊಲಿ ಸಮುದಾಯ ಎಸ್ಟಿಗೆ ಸೇರಿಸಲು ಹಲವು ವರ್ಷಗಳಿಂದ ಬೇಡಿಕೆ ಇಡಲಾಗುತ್ತಿದೆ. ಕಳೆದ 2019ರಲ್ಲಿ ಕೋಲಿ ಸಮಾಜವನ್ನು ಎಸ್ಟಿಗೆ ಸೇರಿಸುವದಾಗಿ ಮೋದಿ ಭರವಸೆ ನೀಡಿದ್ದರು. ಆದರೂ ಬೇಡಿಕೆ ಈಡೇರಿಸಿಲ್ಲ, ಇದೇ 19 ರಂದು ಕಲಬುರಗಿ ಜಿಲ್ಲೆಗೆ ಬರುತ್ತಿರುವ ಪ್ರಧಾನಮಂತ್ರಿಗಳು ಆಗಲಾದರೂ ಎಸ್ಟಿ ಸೇರ್ಪಡೆ ಘೋಷಣೆ ಮಾಡಬೇಕು. ಈ ನಿಟ್ಟಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪ್ರಧಾನಿಗಳ ಮೇಲೆ ಒತ್ತಡ ಹೇರಬೇಕು. ಇಲ್ಲದಿದ್ದರೆ ಬರುವ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗಲಿದೆ ಎಂದು ಎಚ್ಚರಿಸಿದರು.
ಪ್ರಧಾನಿ ಮೋದಿ ಆಗಮನ ಹಿನ್ನೆಲೆ ಕಂದಾಯ ಇಲಾಖೆ ಕಾರ್ಯದರ್ಶಿ ಸಭೆ: ಇದೇ ಜನವರಿ 19 ರಂದು ಸೇಡಂ ತಾಲೂಕಿನ ಮಳಖೇಡದಲ್ಲಿ ಫಲಾನುಭವಿಗಳಿಗೆ ಕಂದಾಯ ಗ್ರಾಮಗಳ ಹಕ್ಕುಪತ್ರಗಳ ವಿತರಿಸುವ ಪ್ರಧಾನಮಂತ್ರಿಗಳ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುವಂತೆ ಕಂದಾಯ ಇಲಾಖೆಯ ಕಾರ್ಯದರ್ಶಿಗಳು ಹಾಗೂ ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಎನ್.ಜಯರಾಮ್ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಾರ್ಯಕ್ರಮದ ಪೂರ್ವಸಿದ್ಧತೆ ಕುರಿತು ಕರೆದಿದ್ದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ಕಾರ್ಯಕ್ರಮವನ್ನು ಸುಸೂತ್ರವಾಗಿ ನಡೆಸಬೇಕು. ಈ ನಿಟ್ಟಿನಲ್ಲಿ ಕಲಬುರಗಿ, ಬೀದರ್, ರಾಯಚೂರು ಹಾಗೂ ವಿಜಯಪುರ ಜಿಲ್ಲಾಧಿಕಾರಿಗಳು ಶ್ರಮಿಸಬೇಕು ಎಂದು ಹೇಳಿದರು.
ಪ್ರಮುಖವಾಗಿ ಕಾರ್ಯಕ್ರಮಕ್ಕೆ ಕಲಬುರಗಿ, ಯಾದಗಿರಿ, ರಾಯಚೂರು, ಬೀದರ್ ಹಾಗೂ ವಿಜಯಪುರ ಜಿಲ್ಲೆಗಳಿಂದ ಫಲಾನುಭವಿಗಳ ಕರೆತರಲು ಸೂಕ್ತ ಬಸ್ ವ್ಯವಸ್ಥೆ ಮಾಡಬೇಕು. ಅವರಿಗೆ ಅಂದು ಬೆಳಗ್ಗೆ ಉಪಹಾರ, ಕಾರ್ಯಕ್ರಮದ ಸ್ಥಳದಲ್ಲಿ ಊಟ, ನೀರಿನ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಬೇಕು ಎಂದು ನಿರ್ದೇಶಿಸಿದರು. ಆಯಾ ಜಿಲ್ಲೆಗಳ ಫಲಾನುಭವಿಗಳ ಕರೆತರಲು, ಊಟದ ವ್ಯವಸ್ಥೆ ಹಾಗೂ ವೇದಿಕೆ ಕರೆತರುವುದು ಮುಂತಾದವುಗಳ ನಿರ್ವಹಣೆಗಾಗಿ ಆಯಾ ಜಿಲ್ಲೆಗಳು ತಲಾ ಓರ್ವ ಸಹಾಯಕ ಆಯುಕ್ತ ಹಾಗೂ ಓರ್ವ ತಹಸೀಲ್ದಾರರನ್ನು ನಿಯೋಜಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದ ಸ್ಥಳದ ಸನಿಹದಲ್ಲಿ ಬಯೋ ಶೌಚಾಲಯಗಳನ್ನು ನಿರ್ಮಿಸಬೇಕು ಹಾಗೂ ಅವುಗಳ ಸ್ವಚ್ಛಗೊಳಿಸಲು ಸ್ಥಳದಲ್ಲೇ ಪೌರ ಕಾರ್ಮಿಕರನ್ನು ನಿಯೋಜಿಸಬೇಕು ಎಂದು ಇದೇ ವೇಳೆ ಸೂಚಿಸಿದರು. ಕಾರ್ಯಕ್ರಮದ ಸ್ಥಳ, ವಾಹನ ನಿಲುಗಡೆ ಸ್ಥಳ ಮುಂತಾದೆಡೆ 30 ಅಗ್ನಿಶಾಮಕ ವಾಹನಗಳ ವ್ಯವಸ್ಥೆ ಗೊಳಿಸಬೇಕು. ಅಗತ್ಯವಿದ್ದಲ್ಲಿ ಇತರೆ ಜಿಲ್ಲೆಗಳಿಂದಲೂ ಅಗ್ನಿಶಾಮಕ ವಾಹನಗಳನ್ನು ತರಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಇದನ್ನೂ ಓದಿ: ನಾಳೆಯಿಂದ ಮತ್ತೆ 18 ದಿನಗಳ ಕಾಲ ಪಂಚರತ್ನ ರಥಯಾತ್ರೆ: ಇಂಡಿಯಿಂದ ಹಿರೇಕೆರೂರು ವರೆಗೆ ಒಟ್ಟು 21 ಕ್ಷೇತ್ರಗಳಲ್ಲಿ ಯಾತ್ರೆ