ಕಲಬುರಗಿ: ಒಂದೂವರೆ ತಿಂಗಳು ತಡವಾಗಿ ಜಿಲ್ಲೆಯಲ್ಲಿ ಮುಂಗಾರು ಅಬ್ಬರ ಪ್ರಾರಂಭವಾಗಿದೆ. ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾರಿ ಮಳೆಯಿಂದ ಹಳ್ಳಕೊಳ್ಳಗಳು ತುಂಬಿ ನದಿಯಂತಾಗಿ, ರಸ್ತೆ ಮೇಲೆ ಹರಿಯುತ್ತಿವೆ. ಹಲವೆಡೆ ರಸ್ತೆ ಸಂಚಾರ ಕಡಿತಗೊಂಡು, ಗ್ರಾಮಗಳು ನಡುಗಡ್ಡೆಯಂತಾಗಿ ಜನರು ಪರದಾಡುತ್ತಿದ್ದಾರೆ. ಜಿಲ್ಲೆಯ ಕೆಲವೆಡೆ ಮನೆಗಳ ಗೋಡೆ ಕುಸಿತವಾಗಿರುವ ಘಟನೆಗಳು ನಡೆದಿವೆ.
ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆ ಬರಗಾಲದಿಂದ ಜಿಲ್ಲೆಯನ್ನು ಪಾರು ಮಾಡಿದೆ. ಸರಾಸರಿ 60 ಎಮ್ಎಮ್ ಮಳೆ ಆಗಿದೆ. ಬರಗಾಲದಿಂದ ಕಂಗೆಟ್ಟಿದ್ದ ಅನ್ನದಾತನ ಮುಖದಲ್ಲಿ ಮಂದಹಾಸ ಮೂಡಿದೆ. ಜಿಲ್ಲೆಯ ಚಿಂಚೋಳಿ ತಾಲೂಕಿನ ಗಾರಂಪಳ್ಳಿ ಗ್ರಾಮಕ್ಕೆ ಜಲಾದಿಬ್ಬಂದನೆ ಆಗಿದೆ. ನಾಗರಾಳ ಬಳಿಯಿರುವ ಮುಲ್ಲಾಮಾರಿ ಜಲಾಶಯದಿಂದ 1809 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಿದ್ದು, ಇದರಿಂದ ಕೆಳ ಭಾಗದಲ್ಲಿರುವ ಗ್ರಾಮಗಳಿಗೆ ರಸ್ತೆ ಸಂಚಾರ ಸ್ಥಗಿತವಾಗುವ ಆತಂಕ ಎದುರಾಗಿದೆ.
ಜೊತೆಗೆ ಚಿಂಚೋಳಿ ತಾಲೂಕಿನ ಗಾರಂಪಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಬ್ರಿಡ್ಜ್ ಕಂ ಬ್ಯಾರೇಜ್ ಮೇಲೆ ನೀರು ಹರಿಯುತ್ತಿರುವದರಿಂದ ರಸ್ತೆ ಸಂಚಾರ ಸ್ಥಗಿತವಾಗಿದೆ. ಮುಲ್ಲಾಮಾರಿ ಕೆಳಭಾಗದ ಇತರೆ ಗ್ರಾಮಗಳಿಗೆ ಕೂಡಾ ನೀರು ನುಗ್ಗಿದೆ. ಸಂಬಂಧ ಪಟ್ಟ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರ ನೆರವಿಗೆ ದಾವಿಸಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ಹನುಮಂತ ಭೋವಿ ಆಗ್ರಹಿಸಿದ್ದಾರೆ.
ಕಲಬುರಗಿ-ಹೈದರಾಬಾದ್ ರಸ್ತ ಸಂಚಾರಕ್ಕೆ ಅಡ್ಡಿ: ಸೇಡಂ ತಾಲೂಕಿನ ಮಳಖೇಡ ಬಳಿ ಇರುವ ಕಾಗಿಣಾ ನದಿ ಮೇಲ್ಸೇತುವೆ ಮೇಲೆ ರಸ್ತೆಯಲ್ಲಿ ನೀರು ಹರಿದಿದ್ದರಿಂದ ಶುಕ್ರವಾರ ಬೆಳಗ್ಗೆ ಸುಮಾರು ಮೂರು ಗಂಟೆಗಳ ಕಾಲ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು. ಇದು ಹೈದರಾಬಾದ್ಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ. ಇದರಿಂದಾಗಿ ಕಲಬುರಗಿ - ಸೇಡಂ-ಹೈದರಾಬಾದ್ ರಸ್ತೆ ಸಂಪರ್ಕ ಕಡಿತವಾಗಿತ್ತು. ಬಳಿಕ ಸಂಚಾರಕ್ಕೆ ಅನುವಾಗಿದೆ. ಆದರೂ ಸೇತುವೆಗೆ ಸಮೀಪ ನೀರು ಹರಿಯುತ್ತಿದ್ದು ಯಾವಗ ಬೇಕಾದ್ರೂ ರಸ್ತೆ ಸಂಚಾರ ಕಡಿತವಾಗಬಹುದಾದ ಸಾಧ್ಯತೆ ಇದೆ. ಅದರಂತೆ ಶಹಬಾದ ಚಿತ್ತಾಪುರ ಮಾರ್ಗದ ಮಧ್ಯೆ ಇರುವ ಕಾಗಿಣಾ ನದಿ ಸೇತುವೆ ಕೂಡಾ ಜಲಾವೃತವಾಗಿ ಸಂಚಾರಕ್ಕೆ ಅಡಚಣೆ ಆಗಿದೆ.
ಚಿತ್ತಾಪುರದಲ್ಲಿ ಎರಡು ಮನೆಗಳು ಮತ್ತು ಚಿಂಚೋಳಿ ತಾಲೂಕಿನಲ್ಲಿ ಒಂದು ಮನೆಯ ಗೊಡೆಗಳು ಕುಸಿದಿವೆ. ಆದರೆ ಯಾವುದೆ ಪ್ರಾಣಹಾನಿ ಸಂಭವಿಸಿಲ್ಲ. ಕಮಲಾಪುರ ಬಳಿ ಹೆದ್ದಾರಿಯಲ್ಲಿ ಬೃಹತ್ ಗಾತ್ರದ ಮರಗಳು ಉರುಳಿ ಸುಮಾರು ಮೂರು ತಾಸುಗಳ ಕಾಲ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿತ್ತು. ಜಿಲ್ಲೆಯ ಹಲವೆಡೆ ರೈತರ ಜಮೀನುಗಳಿಗೆ, ಮನೆಗಳಿಗೆ ಮಳೆ ನೀರು ನುಗ್ಗಿದ್ದು ಆಸ್ತಿ ಪಾಸ್ತಿಗೆ ನಷ್ಟವಾಗಿದೆ.
ಶಾಲೆ ಕಟ್ಟಡ ಶಿಥಿಲ: ಆಳಂದ ತಾಲೂಕಿನ ಮದಗುಣಕಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಐದು ಕೊಣೆಗಳು ಸಂಪೂರ್ಣವಾಗಿ ಶಿಥಿಲಗೊಂಡು, ಮಳೆ ನೀರು ಸೋರುತ್ತಿದೆ. ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ, ಮಕ್ಕಳ ಜೀವದ ಜೊತೆಗೆ ಚಲ್ಲಾಟ ಆಡದೇ ದುರಸ್ಥೆ ಕಾರ್ಯ ಕೈಗೊಳ್ಳಬೇಕೆಂದು ಗ್ರಾಮದ ಮುಖಂಡ ಮಹಾಂತೇಶ ಮದುಗುಣುಕಿ ಆಗ್ರಹಿಸಿದ್ದಾರೆ.
ಕೇಂದ್ರ ಸ್ಥಾನ ಬಿಡದಂತೆ ಡಿಸಿ ಸೂಚನೆ: ಜಿಲ್ಲೆಯಲ್ಲಿ ಭಾರಿ ಮಳೆ ಆಗ್ತಿದ್ದು, ಹವಮಾನ ಇಲಾಖೆ ಮುನ್ಸೂಚನೆ ನೀಡಿರುವಂತೆ ಮಳೆ ಮುಂದುವರೆಯುವ ಸಾಧ್ಯತೆ ಹೆಚ್ಚಿದೆ. ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸರ್ಕಾರಿ ರಜೆ ಇರುವ ದಿನವೂ ಕೂಡಾ ಕೇಂದ್ರ ಸ್ಥಾನದಲ್ಲಿ ಇರಬೇಕು. ಕಾಲ ಕಾಲಕ್ಕೆ ಭಾರಿ ಮಳೆಯಿಂದ ಸಂಭಂವಿಸುವ ಜನ, ಜಾನುವಾರು, ಮನೆ ಹಾಗೂ ಮೂಲಭೂತ ಸೌಕರ್ಯಗಳ ಹಾನಿಗೊಂಡ ಕುರಿತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ತಕ್ಷಣವೇ ಸ್ಥಳ ಪರಿಶೀಲನೆ ಮಾಡಿ ಜಿಲ್ಲಾ ವಿಪತ್ತು ನಿರ್ವಹಣಾ ಘಟಕಕ್ಕೆ ವರದಿ ನೀಡಬೇಕು ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಸೂಚನೆ ನೀಡಿದ್ದಾರೆ.
ಜಿಲ್ಲೆಯ ಜಲಾಶಯಗಳ ನೀರಿನ ಮಟ್ಟ:
1) ಅಮರ್ಜಾ ಜಲಾಶಯ
ಸಾಮರ್ಥ್ಯ: 1.554 ಟಿಎಂಸಿ
ಸದ್ಯದ ನೀರಿನ ಮಟ್ಟ: 0.981 ಟಿಎಂಸಿ
ಒಳ ಹರಿವು: 40 ಕ್ಯೂಸೆಕ್
ಹೊರ ಹರಿವು : ಇಲ್ಲ
2) ಬೆಣ್ಣೆತೋರಾ ಜಲಾಶಯ
ಸಾಮರ್ಥ್ಯ: 5.297 ಟಿಎಂಸಿ
ಸದ್ಯದ ನೀರಿನ ಮಟ್ಟ: 3.160 ಟಿಎಂಸಿ
ಒಳ ಹರಿವು : 131 ಕ್ಯೂಸೆಕ್
ಹೊರ ಹರಿವು : 123 ಕ್ಯೂಸೆಕ್
3) ಭೀಮಾ ಸೊನ್ನ ಬ್ಯಾರೇಜ್
ಸಾಮರ್ಥ್ಯ : 3.166 ಟಿಎಂಸಿ
ಸದ್ಯದ ನೀರಿನ ಮಟ್ಟ : 1.704 ಟಿಎಂಸಿ
ಒಳ ಹರಿವು : 7330 ಕ್ಯೂಸೆಕ್
ಹೊರ ಹರಿವು : 8626 ಕ್ಯೂಸೆಕ್
4) ಚಂದ್ರಂಪಳ್ಳಿ ಡ್ಯಾಮ್
ಸಾಮರ್ಥ್ಯ :1.208 ಟಿಎಂಸಿ
ಸದ್ಯದ ನೀರಿನ ಮಟ್ಟ : 0.635 ಟಿಎಂಸಿ
ಒಳ ಹರಿವು : 171 ಕ್ಯೂಸೆಕ್
ಹೊರ ಹರಿವು : ಇಲ್ಲ
5) ಗಂಡೋರಿ ನಾಲಾ ಜಲಾಶಯ
ಸಾಮರ್ಥ್ಯ : 1.887 ಟಿಎಂಸಿ
ಸದ್ಯದ ನೀರಿನ ಮಟ್ಟ: 1.293 ಟಿಎಂಸಿ
ಒಳ ಹರಿವು : 174 ಕ್ಯೂಸೆಕ್
ಹೊರ ಹರಿವು : 174
6) ಮುಲ್ಲಾಮಾರಿ ಜಲಾಶಯ
ಸಾಮರ್ಥ್ಯ : 1.736 ಟಿಎಂಸಿ
ಸದ್ಯದ ನೀರಿನ ಮಟ್ಟ : 1.306 ಟಿಎಂಸಿ
ಒಳ ಹರಿವು : 1809 ಕ್ಯೂಸೆಕ್
ಹೊರ ಹರಿವು : 1809 ಕ್ಯೂಸೆಕ್
ಇದನ್ನೂ ಓದಿ: ಹೇಮಾವತಿ ನದಿಯಲ್ಲಿ ವೃದ್ಧೆಯ ಶವ ಪತ್ತೆ: ಚಿಕ್ಕಮಗಳೂರಿನಲ್ಲಿ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತ