ಧಾರವಾಡ: ಹಿರಿಯ ಸಾಹಿತಿ ಚನ್ನವೀರ ಕಣವಿ ಅವರಿಗೆ ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
ಧಾರವಾಡದ ಚನ್ನವೀರ ಕಣವಿ ಅವರ ಮನೆಗೆ ಆಗಮಿಸಿದ ಕುಲಪತಿ ಪ್ರೊ.ಎಚ್.ಎಮ್.ಮಹೇಶ್ವರಯ್ಯ ವಿವಿಯ 5ನೇ ಘಟಿಕೋತ್ಸವದ ನಿಮಿತ್ತ ಘೋಷಿಸಲ್ಪಟ್ಟಿದ್ದ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು. ವಿಶ್ವವಿದ್ಯಾಲಯ ಇದುವರೆಗೆ ದೇಶದ 13 ಜನ ಸಾಧಕರಿಗೆ ಗೌರವ ಡಾಕ್ಟರೇಟ್ ಪುರಸ್ಕಾರ ನೀಡಿ ಗೌರವಿಸಿದೆ.
ಈ ವೇಳೆ ಮಾತನಾಡಿದ ನಾಡೋಜ ಡಾ.ಚನ್ನವೀರ ಕಣವಿ, ಕೇಂದ್ರೀಯ ವಿಶ್ವವಿದ್ಯಾಲಯ ನೀಡಿರುವ ಗೌರವ ಡಾಕ್ಟರೇಟ್ ಪದವಿಯನ್ನ ಸಮಸ್ತ ಸಹೃದಯಿ ಕನ್ನಡಿಗರಿಗೆ ಸಮರ್ಪಣೆ ಮಾಡಿದ್ದೇನೆ. ಈ ಪದವಿಯು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವದಷ್ಟೇ ಸಮಾನವಾಗಿದೆ ಎಂದು ಹೇಳಿದರು.
‘ಅಭಿವಂದನೆ’ ಎಂದರೆ ಗೌರವ ಪೂರ್ವಕ ನಮಸ್ಕಾರ ಎಂಬ ಕವಿತೆ ವಾಚಿಸಿದರು. ಸಮಾರಂಭದ ಪ್ರಾರಂಭದಲ್ಲಿ ಇಂದು ನಿಧನದರಾದ ಹಿರಿಯ ಸಾಹಿತಿ ಪ್ರೊ.ಜಿ.ಎಸ್.ಅಮೂರ ಅವರಿಗೆ ನುಡಿನಮನ ಸಲ್ಲಿಸಿ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.