ಹಾವೇರಿ: ಯಾವ ರಾಜ್ಯದಲ್ಲಿ ಚುನಾವಣೆ ಪ್ರಾರಂಭವಾಗುತ್ತದೆ, ಆ ರಾಜ್ಯದಲ್ಲಿ ವಿರೋಧ ಪಕ್ಷಗಳ ಮುಖಂಡರ ಮೇಲೆ ಐಟಿ ರೈಡ್ ನಡೆಯುತ್ತವೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಹಲಗೇರಿಯಲ್ಲಿ ಪಂಚರತ್ನ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಚುನಾವಣೆ ವರೆಗೆ ನಿರಂತರವಾಗಿ ಐಟಿ ದಾಳಿ ಸರ್ವೇ ಸಾಮಾನ್ಯ, ಏಕೆಂದರೆ ಐಟಿ ದಾಳಿ ನಡೆಸುವುದು ಬಿಜೆಪಿ ಪಕ್ಷದ ಚುನಾವಣೆ ಸಿಸ್ಟ್ಮ್ ಆಗಿದೆ ಎಂದು ಹೇಳಿದರು.
ಬಿಜೆಪಿ ಸರ್ಕಾರ ಬಂದ ಮೇಲೆ ಯಾವ ರಾಜ್ಯದಲ್ಲಿ ಚುನಾವಣೆ ನಡೆಯುತ್ತದೆ, ಆ ರಾಜ್ಯದ ವಿರೋಧ ಪಕ್ಷಗಳ ಮುಖಂಡರ ಮೇಲೆ ಐಟಿ ರೈಡ್ ಮಾಡುವುದು ಸಾಮಾನ್ಯವಾಗಿದೆ. ಇದು ಒಂದು ಹೊಸ ಸಂಪ್ರದಾಯ, ಗುಜರಾತ್ನಲ್ಲಿ ನಡೆದ ಘಟನೆಯ ಬಗ್ಗೆ ನೈಜ್ಯ ಚಿತ್ರಿಕರಣ ಮಾಡಿದ್ದಾರೆ ಎಂದು ಬಿಬಿಸಿ ಮಾಧ್ಯಮದವರನ್ನೇ ಬಿಡಲಿಲ್ಲ, ಇದರ ಬಗ್ಗೆ ಎಷ್ಟು ಚರ್ಚೆ ಮಾಡಿದರು ಯಾವುದೇ ಪ್ರಯೋಜನವಿಲ್ಲ, ಚುನಾವಣೆ ಮುಗಿಯುವ ವರೆಗೂ ಇದು ನಡೆಯುತ್ತಲೇ ಇರುತ್ತದೆ. ಲೋಕಸಭೆ ಚುನಾವಣೆಯಲ್ಲಿಯೂ ಸಮಯದಲ್ಲೂ ಇದೇ ಕೆಲಸ ಮಾಡಿದ್ದರು, ಈಗಲೂ ಅದನ್ನೇ ಮಾಡುತ್ತಿದ್ದಾರೆ ಎಂದು ಹೇಳಿದರು.
ರಾಜ್ಯ ಮತ್ತು ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ: ಬಿಜೆಪಿಯವರು ಮಹಾನ್ ಹರೀಶ್ಚಂದ್ರರು ಯಾರೂ ಭ್ರಷ್ಟಾಚಾರ ಮಾಡದೇ ಇರುವವರು, ಬಿಜೆಪಿಯವರು ಚುನಾವಣೆಗೆ ಹಣ ಖರ್ಚು ಮಾಡದೇ ಕೈ ಮುಗಿದುಕೊಂಡು ಹೋಗಿ ಚುನಾವಣೆ ನಡೆಸುತ್ತಾರೆ. ನರೇಂದ್ರ ಮೋದಿಯವರ ಮುಖ ನೋಡಿ ಜನ ಓಟ್ ಹಾಕುವ ಪರಿಸ್ಥಿತಿ ಇದೆ, ಸಭೆ ಸಮಾರಂಭ ನಡೆಸುವುದಕ್ಕೆ ಅವರಿಗೆ ದುಡ್ಡೇ ಬೇಕಾಗಿಲ್ಲ, ಇದು ರಾಜ್ಯದಲ್ಲಿ ಹಾಗೂ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ಗೂಳಿಹಟ್ಟಿ ಶೇಖರ್ ಪತ್ರದ ವಿಚಾರ: ವಿಧಾನಸಭೆಯಲ್ಲಿ ಸಿದ್ದರಾಮಯ್ಯನವರು ದಾಖಲೆ ಕೊಡಿ ಎಂದು ಹೇಳಿದ್ದಾರೆ, ಯಾವ ದಾಖಲೆ ಇಡೋದು?, ಕಮಿಷನ್ ಏನು ವೈಟ್ ಆಂಡ್ ವೈಟ್ ತಗೊಂಡಿದಾರಾ?, ಎಲ್ಲಾ ಬ್ಲಾಕ್ ಮನಿ ತಗೊಂಡಿರುತ್ತಾರೆ ದಾಖಲೆ ಎಲ್ಲಿ ಇಡೋಕಾಗುತ್ತೆ?. ಬಿಜೆಪಿ ಶಾಸಕನೇ ಟೆಂಡರ್ ಪ್ರಕ್ರಿಯೆಯಲ್ಲಿ ಸಾವಿರಾರು ಕೋಟಿ ಅವ್ಯವಹಾರ ಆಗಿದೆ ಎಂದು ಚರ್ಚೆ ಮಾಡಿದ ಮೇಲೆ ಈ ಸರ್ಕಾರದ ಮೇಲೆ ಏನು ಚರ್ಚೆ ಮಾಡ್ತೀರಿ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಜನತಾ ದಳವನ್ನು ಜನತೆಯ ಹೃದಯದಿಂದ ತೆಗೆಯೋಕೆ ಸಾಧ್ಯವಿಲ್ಲ : ಜೆಡಿಎಸ್ ಪಕ್ಷದ ಪಂಚರತ್ನ ಯಾತ್ರೆಯ ವೇಗ ಎರಡೂ ಪಕ್ಷಗಳಿಗೆ ಅರಿಗಿಸಿಕೊಳ್ಳೋಕೆ ಸಾದ್ಯವಾಗುತ್ತಿಲ್ಲ, ಎರಡೂ ಪಕ್ಷದವರು ಕುಮಾರಸ್ವಾಮಿ ಸಂಖ್ಯೆ ಹೇಗೆ ಕಡಿಮೆ ಮಾಡಬೇಕು ಎಂದು ತಲೆ ಕೆಡಿಸಿಕೊಂಡಿದ್ದಾರೆ, ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳ ಬಗ್ಗೆ ಜನರಿಗೆ ಭ್ರಮ ನಿರಸನವಾಗಿದೆ, ರಾಜ್ಯದಲ್ಲಿ ಹೊಸ ಬದಲಾವಣೆ ಬೇಕೆಂದು ಜನತೆಯ ಭಾವನೆಯಾಗಿದೆ. ಇವರು ಯಾವ ರಾಜಕೀಯ ಬ್ರಹ್ಮಾಸ್ರ್ರ ಪ್ರಯೋಗಿಸಿದರು ಜನತಾ ದಳವನ್ನು ಈ ಬಾರಿ ಜನತೆಯ ಹೃದಯದಿಂದ ತೆಗೆಯೋಕೆ ಸಾಧ್ಯವಿಲ್ಲ ಎಂದು ಹೇಳಿದರು.
ರಮ್ಯಾ ಅಥವಾ ನಟ ಸುದೀಪ್ ಚನ್ನಪಟ್ಟಣದಲ್ಲಿ ಸ್ಪರ್ದೆ ವಿಚಾರದ ಬಗ್ಗೆ ಮಾತನಾಡಿದ ಅವರು, ರಮ್ಯಾ ಅವರು ನನ್ನ ಸಹೋದರಿ ಸಮಾನ, ನನ್ನ ವಿರುದ್ಧ ನಿಲ್ಲಬೇಕು ಅಂತ ಇದ್ದರೆ ನಿಲ್ಲಬಹುದು ಯಾರು ಎಲ್ಲಿ ಬೇಕಾದರೂ ನಿಲ್ಲಬಹುದು, ನಿಲ್ಲಬೇಡಿ ಎಂದು ಹೇಳೋಕೆ ಆಗುವುದಿಲ್ಲ, ಅಂತಿಮವಾಗಿ ಜನರು ಚುನಾವಣೆಯಲ್ಲಿ ತಿರ್ಮಾನ ಮಾಡುತ್ತಾರೆ ಎಂದು ಹೆಚ್ಡಿಕೆ ತಿಳಿಸಿದರು.
ಇದನ್ನೂ ಓದಿ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಬರೀ ವಸೂಲಿ ಬಾಜಿ ನಡೆಯುತ್ತಿದೆ: ಡಿಕೆಶಿ ಆರೋಪ