ಹಾಸನ: ಪೊಲೀಸ್ ಠಾಣೆಯಲ್ಲೇ ವ್ಯಕ್ತಿಯೊಬ್ಬ ತನ್ನ ಪತ್ನಿಯ ಕೊಲೆಗೆ ಯತ್ನಿಸಿದ ಘಟನೆ ಹಾಸನದಲ್ಲಿ ಸೋಮವಾರ ನಡೆದಿದೆ. ಕಿರುಕುಳದಿಂದ ಬೇಸತ್ತು ಪತ್ನಿ ದೂರು ನೀಡಲು ಪೊಲೀಸ್ ಠಾಣೆಗೆ ಹೋಗಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ. ಹರೀಶ್ (34) ಪ್ರಕರಣದ ಆರೋಪಿ. ಶಿಲ್ಪಾ ಗಂಡನಿಂದ ಹಲ್ಲೆಗೊಳಗಾದವರು.
ಹರೀಶ್ ಮತ್ತು ಶಿಲ್ಪಾ ಕಳೆದ 6 ವರ್ಷಗಳ ಹಿಂದೆ ಮದುವೆಯಾಗಿದ್ದರು. ಹಾಸನದ ಕೈಗಾರಿಕಾ ಪ್ರದೇಶದ ಸಮೀಪವಿರುವ ಬಿಟ್ಟಗೌಡನಹಳ್ಳಿಯಲ್ಲಿ ವಾಸವಿದ್ದರು. ಪತ್ನಿ ವಿರುದ್ಧ ಆರೋಪಿ ಅನುಮಾನ ಪಡುತ್ತಿದ್ದ. ಈ ನಡೆಯನ್ನು ಪ್ರಶ್ನಿಸಿದರೆ ಹಲ್ಲೆ ಮಾಡುತ್ತಿದ್ದ. ಹೀಗೆ ಪ್ರತಿನಿತ್ಯದ ಕಿರುಕುಳದಿಂದ ನೊಂದ ಶಿಲ್ಪಾ ಕೊನೆಗೆ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ್ದರು.
ದೂರಿನಂತೆ ಪೊಲೀಸರು ಆರೋಪಿಯನ್ನು ಕರೆಯಿಸಿ ಬುದ್ಧಿ ಹೇಳಲು ಮುಂದಾಗಿದ್ದರು. ಈ ವೇಳೆ ಪಿಎಸ್‌ಐ ಉಮಾ ಅವರು ಹರೀಶ್ನನ್ನು ವಿಚಾರಣೆ ಮಾಡುತ್ತಿದ್ದರು. ಇದರಿಂದ ಕುಪಿತನಾದ ಆತ ಪೊಲೀಸರೆದುರೇ ಪತ್ನಿಯ ಹತ್ಯೆ ಮುಂದಾದ. ತಾನು ಮೊದಲೇ ತಂದಿದ್ದ ಚಾಕುವಿನಿಂದ ಕುತ್ತಿಗೆ ಕೊಯ್ದಿದ್ದಾನೆ. ತಕ್ಷಣ ಪೊಲೀಸರು ಮಧ್ಯಪ್ರವೇಶಿಸಿ ಚಾಕು ಕಿತ್ತುಕೊಂಡಿದ್ದಾರೆ.
ಗಾಯಾಳು ಶಿಲ್ಪಾಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹರೀಶ್ ವಿರುದ್ಧ ಹಾಸನ ಮಹಿಳಾ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬೆಂಗಳೂರು: ವೃದ್ದೆ ಬಳಿ ಮಂತ್ರ ಹಾಕಿಸಲು ಬಂದ ಯುವಕನಿಂದ ಸರಗಳ್ಳತನ
ವಿಜಯನಗರದಲ್ಲಿ ಯುವತಿ ಸಾವು: ಯುವತಿ ತನ್ನ ಮದುವೆಗೆ ಮೂರು ದಿನ ಇರುವಾಗ ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಹೊಸಪೇಟೆ ತಾಲೂಕಿನ ಟಿಬಿ ಡ್ಯಾಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವತಿ ತನ್ನ ಪ್ರಿಯಕರನ ಮನೆಯಲ್ಲಿ ಮೃತಪಟ್ಟಿದ್ದಳು. ಪ್ರೀತಿಸುತ್ತಿದ್ದ ಯುವಕನೊಂದಿಗೆ ಈಕೆಗೆ ವಿವಾಹ ನಿಗದಿಯಾಗಿತ್ತು. ಆದರೆ ಯುವಕ ಮೇಲ್ಜಾತಿಯವನಾಗಿದ್ದನು. ಜಾತಿ ಕಾರಣದಿಂದ ಯುವಕನ ಕಡೆಯವರು, ಹುಡುಗಿಯನ್ನು ಒಂದು ವಾರ ಮುಂಚೆ ಹುಡುಗನ ಅಜ್ಜಿ ಮನೆಗೆ ಕಳುಹಿಸಿಕೊಡಬೇಕು ಎಂದಿದ್ದಲ್ಲದೇ, ಮದುವೆಗೆ ಹುಡುಗಿ ತಂದೆ ಮತ್ತು ತಂಗಿ ಮಾತ್ರ ಬರಬೇಕು, ಸಂಬಂಧಿಕರು ಬರುವಂತಿಲ್ಲ ಎಂದೆಲ್ಲ ಷರತ್ತು ಹಾಕಿದ್ದರು. ಅವರ ಮಾತಿನಂತೆ ಹುಡುಗಿಯನ್ನು ಹುಡುಗನ ಅಜ್ಜಿ ಮನೆಗೆ ಕಳುಹಿಸಿಕೊಡಲಾಗಿತ್ತು. ಆದರೆ ಅಲ್ಲಿ ಯುವತಿ ಸಾವನ್ನಪ್ಪಿದ್ದು ಹುಡುಗನ ಕುಟುಂಬದ ವಿರುದ್ಧ ಮೃತ ಯುವತಿಯ ಪೋಷಕರು ಜಾತಿನಿಂದನೆ, ಕಿರುಕುಳದಡಿ ದೂರು ದಾಖಲಿಸಿದ್ದಾರೆ.