ಅರಸೀಕೆರೆ(ಹಾಸನ): ಅರಸೀಕೆರೆ ತಾಲ್ಲೂಕಿನ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ರಸ್ತೆಯ ಜಾಗ ಖಾಸಗಿ ವ್ಯಕ್ತಿಗೆ ಸೇರಬೇಕು ಎನ್ನುವ ವಿಚಾರ ಘರ್ಷಣೆಯ ಹಂತ ತಲುಪಿ ಸದ್ಯ ಪೊಲೀಸ್ ಠಾಣೆಯ ಮೆಟ್ಟಿಲೇರಿದ ಘಟನೆ ನಡೆದಿದೆ.
ನಗರದ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ರಾಂಪುರ ಮತ್ತು ಜೆ.ಸಿ.ಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ. ಈಗ ರಸ್ತೆ ಖಾಸಗಿ ವ್ಯಕ್ತಿಗೆ ಸೇರಬೇಕು ಎನ್ನುವ ವಿಚಾರದ ಹಿನ್ನೆಲೆಯಲ್ಲಿ ಈ ರಸ್ತೆಯನ್ನು ಬಂದ್ ಮಾಡಲಾಗಿತ್ತು. ಇಂದು ತಾಲ್ಲೂಕು ಭೂಮಾಪನ ಇಲಾಖೆಯ ಅಧಿಕಾರಿಗಳೊಡನೆ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಸಂತೋಷ್ ಕುಮಾರ್, ಜಿ.ಪಂ.ಸದಸ್ಯ ಮಾಡಾಳು ಸ್ವಾಮಿ, ಮತ್ತು ಗ್ರಾಮ ಲೆಕ್ಕಿಗ ಹರೀಶ್ ಸ್ಥಳ ಪರಿಶೀಲನೆ ನಡೆಸುವ ಸಂದರ್ಭದಲ್ಲಿಯೇ ರಸ್ತೆ ವಿವಾದಕ್ಕೆ ಕಾರಣವಾದ ಶೇಖರಪ್ಪ ಮತ್ತು ಮರುಳಪ್ಪ ಅಧಿಕಾರಿಗಳ ಮುಂದೆಯೇ ಕೈ-ಕೈ ಮಿಲಾಯಿಸಿದರು.
ಸಾರ್ವಜನಿಕರಿಗೆ ಅನುಕೂಲವಾಗಿರೋ ಈ ರಸ್ತೆಯ ಎಡಭಾಗ ಮತ್ತು ಬಲ ಭಾಗದ ಮಧ್ಯೆ ಸಮವಾಗಿದ್ದು, ಬಲಭಾಗದ ಜಮೀನಿನ ಮಾಲೀಕನಾದ ಶೇಖರಪ್ಪ ಸಾರ್ವಜನಿಕ ಬಳಕೆಗಾಗಿ ರಸ್ತೆಯನ್ನg ಬಿಟ್ಟುಕೊಡಲು ಮುಂದಾಗಿದ್ದಾರೆ. ಎಡಭಾಗದ ಜಮೀನಿನ ಮಾಲೀಕ ಮರುಳಪ್ಪ ರಸ್ತೆಗೆ ಸಮವಾಗಿ ರಸ್ತೆಯ ನಿರ್ಮಾಣಕ್ಕೆ ಭೂಮಿ ಬಿಟ್ಟುಕೊಡಲು ನಿರಾಕರಿಸಿದ್ದಾರೆ. ಈ ಬಗ್ಗೆ ತಾಲ್ಲೂಕು ಆಡಳಿತ ಮನವಿ ಮಾಡಿದ್ರೂ ಒಪ್ಪದ ಕಾರಣ ಸಂಧಾನಕ್ಕೆ ಬಂದ ಅಧಿಕಾರಿಗಳು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸ್ಸಾಗಿದ್ದರಿಂದ ಸಂಧಾನ ವಿಫಲವಾಯ್ತು.
ಈ ಭಾಗದ ಸ್ಥಳೀಯರು ಪೂರ್ವಜರ ಕಾಲದಿಂದಲೂ ಇದೇ ರಸ್ತೆಯನ್ನು ಬಳಸಿ ಜೆ.ಸಿ.ಪುರ, ಮಾಡಾಳು, ದೊಡ್ಡಮೇಟಿಕುರ್ಕಿ ಸೇರಿದಂತೆ ಹತ್ತಾರು ಗ್ರಾಮಗಳಿಗೆ ಪ್ರಯಾಣ ಬೆಳೆಸಲು ಬಳಸುತ್ತಿದ್ದರು. ಈಗ ಇವರಿಬ್ಬರ ವೈಯಕ್ತಿಕ ದ್ವೇಷ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡಿದೆ. ಕಾನೂನಿನ ತೀರ್ಪು ಬರುವ ತನಕ ರಸ್ತೆಯನ್ನ ತಾತ್ಕಾಲಿಕವಾಗಿ ಯಥಾಸ್ಥಿತಿಯಲ್ಲಿ ಮುಂದುವರೆಸಿ ಎಂದು ಸ್ಥಳೀಯರು ತಹಶೀಲ್ದಾರ್ಗೆ ಮನವಿ ಮಾಡಿದ್ದಾರೆ. ಆದ್ರೆ, ಕಾನೂನು ಸಮರದಲ್ಲಿಯೇ ನ್ಯಾಯ ಪಡೆಯುತ್ತೇನೆ ಎಂದು ಮರುಳಪ್ಪ ಪಟ್ಟು ಹಿಡಿದಿದ್ದಾರೆ.