ಹಾಸನ: ವರ್ಷಕ್ಕೊಮ್ಮೆ ದರ್ಶನ ಕೊಡುವ ಹಾಸನಾಂಬೆ ದೇವಾಲಯದ ಬಾಗಿಲು ಇಂದು ತೆರೆಯುವ ಮೂಲಕ ಜಿಲ್ಲಾಡಳಿತ ವಿದ್ಯುಕ್ತವಾಗಿ ಚಾಲನೆ ನೀಡಿದೆ. ಮೊದಲ ದಿನ ಸಾರ್ವಜನಿಕರಿಗೆ ದರ್ಶನ ಭಾಗ್ಯ ಇರುವುದಿಲ್ಲ ಎಂದು ಸ್ಪಷ್ಟವಾಗಿ ಜಿಲ್ಲಾಡಳಿತ ಹೇಳಿದರೂ ಸಾವಿರಾರು ಭಕ್ತರು ಆಗಮಿಸಿ ಪೊಲೀಸರಿಗೆ ತಲೆನೋವಾಗಿರುವ ಪ್ರಸಂಗ ಇಂದು ನಡೆದಿದೆ.
ಬ್ಯಾರಿಕೇಡನ್ನು ಕಿತ್ತು ದೇವಿ ದರ್ಶನ: ಹಾಸನಾಂಬೆಯ ದರ್ಶನಕ್ಕೆ ಇವತ್ತು ಮೊದಲ ದಿನವಾಗಿದ್ದು ಸಾರ್ವಜನಿಕರಿಗೆ ದರ್ಶನ ಇರಲಿಲ್ಲ. ಆದರೆ ಇಂದಿನಿಂದ ದರ್ಶನ ಪ್ರಾರಂಭವಾಗುತ್ತದೆ ಎಂಬ ಕಾರಣಕ್ಕಾಗಿ ನಾನಾ ಕಡೆಯಿಂದ ಮತ್ತು ಸ್ಥಳೀಯ ಜನಪ್ರತಿನಿಧಿಗಳು ಮೊದಲೇ ದಿನವೇ ಆಗಮಿಸಿ ದೇವಿ ದರ್ಶನಕ್ಕೆ ಮುಂದಾದರು. ಅಲ್ಲದೇ ಶಕ್ತಿ ಯೋಜನೆಯಿಂದ ಈ ಬಾರಿ ಹಾಸನಾಂಬ ದೇವಾಲಯಕ್ಕೆ 10 ಲಕ್ಷಕ್ಕೂ ಹೆಚ್ಚು ಸಂಖ್ಯೆಯಲ್ಲಿ ಆಗಮಿಸುವ ಸಂಬಂಧ ಈ ಬಾರಿ, ಭದ್ರತೆಗಾಗಿ ಸುಮಾರು 1,200 ಪೊಲೀಸರನ್ನು ಇಲಾಖೆ ನಿಯೋಜನೆ ಮಾಡಿದೆ.
ಪ್ರತಿನಿತ್ಯ ಮೂರು ಪಾಳಿಯಲ್ಲಿ ಕೆಲಸ ಮಾಡುವುದರಿಂದ ಹಾಸನ ನಗರ ಮತ್ತು ವಿವಿಧ ತಾಲೂಕುಗಳ ಪೊಲೀಸರ ಜೊತೆಗೆ ಪಕ್ಕದ ಮಂಡ್ಯ, ಚಿಕ್ಕಮಗಳೂರು ಜಿಲ್ಲೆಯ ಪೊಲೀಸರನ್ನೂ ದರ್ಶನದ ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಹಾಗೂ ಹಾಸನಾಂಬೆ ದೇವಾಲಯದ ಬಾಗಿಲು ತೆಗೆಯುವ ಮೊದಲು ಜಿಲ್ಲಾ ಉಸ್ತುವಾರಿ ಸಚಿವರು ಒಳ ಬರುತ್ತಿದ್ದಂತೆ ಹಿಂದೆಯೇ ನೂರಾರು ಜನ, ಕಾಂಗ್ರೆಸ್ ಕಾರ್ಯಕರ್ತರು ಬಂದಿದ್ದು, ಇವರನ್ನು ಪೊಲೀಸರು ತಡೆದರು.
ಜತೆಗೆ ಸ್ಥಳೀಯ ನಾಯಕರುಗಳ ಪರಿಚಯ ಇಲ್ಲದ ಹಿನ್ನೆಲೆಯಲ್ಲಿ, ಜನಪ್ರತಿನಿಧಿಗಳನ್ನು ದರ್ಶನಕ್ಕೆ ಬಿಡಲು ಪೊಲೀಸರು ಹಿಂದೇಟು ಹಾಕಿದರು. ಪೊಲೀಸರ ಈ ನಡೆ ಸಚಿವರ ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರು ಮತ್ತು ಭಕ್ತರ ಆಕ್ರೋಶಕ್ಕೆ ಕಾರಣವಾಯಿತು. ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಲೇ ಬ್ಯಾರಿಕೇಡ್ ಮುರಿದು ಜನರು ದರ್ಶನ ಮಾಡಿದರು.
ಈ ಬಾರಿ ಜಿಲ್ಲಾಡಳಿತದಿಂದ ಹಾಸನಾಂಬೆ ದೇವಿ ದರ್ಶನವನ್ನು ಕಟ್ಟುನಿಟ್ಟಾಗಿ ವ್ಯವಸ್ಥೆ ಮಾಡಲಾಗಿದ್ದು, ಐಡಿ ಕಾರ್ಡ್ ಇದ್ದವರಿಗೆ ಒಳ ಪ್ರವೇಶ ಮಾಡಲು ಚಕ್ರವ್ಯೂಹ ದಾಟಿ ಬಂದಂತೆ ಅನುಭವವಾಗಿದೆ. ಆದರೆ, ಜನಪ್ರತಿನಿಧಿಗಳ ಆಕ್ರೋಶದಿಂದ ಬ್ಯಾರಿಕೇಡ್ ಕಿತ್ತು ಒಳ ಬರುವ ವೇಳೆ ಅಲ್ಲೇ ಇದ್ದ ಮಹಿಳಾ ಪೊಲೀಸ್ ಸಿಬ್ಬಂದಿಯ ಕಾಲಿಗೆ ಮತ್ತು ಭುಜಕ್ಕೆ ಪೆಟ್ಟಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಒಟ್ಟಿನಲ್ಲಿ ಎಲ್ಲವೂ ಸರಿಯಾಗಿದೆ ಎಂದು ಹೇಳುವ ಹಾಸನ ಜಿಲ್ಲಾಡಳಿತ ಪ್ರತಿವರ್ಷ ಒಂದಲ್ಲ ಒಂದು ಸಮಸ್ಯೆ ಮಾಡಿಕೊಳ್ಳುತ್ತಲೆ ಇರುತ್ತದೆ.
ಇದನ್ನೂ ಓದಿ: ಸಂಪ್ರದಾಯದಂತೆ ವರ್ಷದ ಬಳಿಕ ಮತ್ತೆ ತೆರೆದ ಬಾಗಿಲು: ಹಾಸನಾಂಬ ದೇವಿಯ ದರ್ಶನೋತ್ಸವ ಆರಂಭ