ಹುಬ್ಬಳ್ಳಿ: ಅನುದಾನ ರಹಿತ ಶಾಲೆಗಳ ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿ ಜ.17ರಿಂದ ರಾಜ್ಯಾದ್ಯಂತ ಶಾಲಾ ಕಾಲೇಜುಗಳನ್ನು ಅನಿರ್ದಿಷ್ಟವಾಧಿ ಸ್ಥಗಿತಗೊಳಿಸಿ ಹೋರಾಟ ನಡೆಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ತಿಳಿಸಿದರು.
ಇಂದು ನಗರದ ಲ್ಯಾಮಿಂಗ್ಟನ್ ಸ್ಕೂಲ್ನಲ್ಲಿ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ಅನುದಾನ ರಹಿತ ಶಾಲೆಗಳ ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿ ಹೋರಾಟ ನಡೆಸುವ ಕುರಿತು ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ. ಜ. 17ರಂದು ಶಾಲಾ ಕಾಲೇಜುಗಳನ್ನು ಬಂದ್ ಮಾಡಿ ಧಾರವಾಡದಲ್ಲಿ ಬೃಹತ್ ಹೋರಾಟ ನಡೆಸಿ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಮನವಿ ನೀಡಲಾಗುವುದು. ಇದಕ್ಕೂ ಯಾವುದೇ ಪರಿಹಾರ ದೊರಕದಿದ್ದಲ್ಲಿ ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡಲಾಗುವುದು ಎಂದರು.
ಹೊಸ ಪಿಂಚಣಿ ಪದ್ಧತಿ ರದ್ದು, ಶಿಕ್ಷಕರು ಮತ್ತು ಮಕ್ಕಳ ಅನುಪಾತ, ಅನುದಾನ ಬಿಡುಗಡೆ, ಸರ್ಕಾರಿ ಶಾಲೆಗಳಿಗೆ ನೀಡುವ ಎಲ್ಲಾ ಸೌಲಭ್ಯಗಳನ್ನು ಅನುದಾನ ರಹಿತ, ಅನುದಾನ ಸಹಿತ ಶಾಲೆಗಳಿಗೆ ನೀಡುವುದು ಸೇರಿ ಹತ್ತು ಹಲವು ಬೇಡಿಕೆ ಈಡೇರಿಸಲು ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುವುದು. ಈ ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳು ಸೇರಿ ವಿವಿಧ ಸಂಘಟನೆಗಳು ಭಾಗಿಯಾಗಲಿವೆ ಎಂದರು.
ಹಂದಿಗುಂದ ಶಿವಾನಂದ ಸ್ವಾಮೀಜಿ, ಗಿರಿಸಾಗರ ರುದ್ರಮುನಿ ಸ್ವಾಮೀಜಿ ಸೇರಿ ಹಲವು ಸ್ವಾಮೀಜಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.