ದಾವಣಗೆರೆ : ಜಿಲ್ಲೆಯ ಚನ್ನಗಿರಿ ತಾಲೂಕಿನ ಕತ್ತಲಗೆರೆ ಗ್ರಾಮದಲ್ಲಿ ಸುಂದರವಾದ ಸಂಸಾರ ಕಟ್ಟಿಕೊಂಡಿದ್ದ ಗೃಹಿಣಿಯೊಬ್ಬರು ಯಾರೂ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಇಬ್ಬರು ಮುದ್ದಾದ ಇಬ್ಬರು ಮಕ್ಕಳನ್ನು ಬಿಟ್ಟು ಕೊನೆಯುಸಿರೆಳೆದಿರುವ ಗೃಹಿಣಿಯ ಸಾವು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಆ ಮಹಿಳೆ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದು, ತವರು ಮನೆಯವರು ಮಾತ್ರ ಗಂಡನ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಮಾಡ್ತಿದ್ದಾರೆ. ನಮಗೆ ನ್ಯಾಯ ಕೊಡ್ಸಿ ಎಂದು ಮೃತಳ ಸಂಬಂಧಿಕರು ಅಂಗಲಾಚಿ ಬೇಡಿಕೊಂಡಿದ್ದಾರೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕತ್ತಲಗೆರೆ ಗ್ರಾಮದ ಅಶೋಕ್ ಕಳೆದ 5 ವರ್ಷಗಳ ಹಿಂದೆ ದಾವಣಗೆರೆ ನಗರದ ಅನಿತಾ ಎನ್ನುವರನ್ನು ಮದುವೆಯಾಗಿದ್ದರು. ಅಲ್ಲದೇ ಒಳ್ಳೆಯ ಯುವಕ, ರೂಪವಂತ, ದ್ವಿಚಕ್ರವಾಹನದ ಶೋ ರೂಂ ಒಂದರಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಾನೆ. ತನ್ನ ಮಗಳನ್ನು ಸುಖವಾಗಿ ನೋಡಿಕೊಳ್ಳುತ್ತಾನೆ ಎನ್ನುವ ನಂಬಿಕೆಯಲ್ಲಿ ಅನಿತಾಳನ್ನು ಮದುವೆ ಮಾಡಿಕೊಟ್ಟಿದ್ದರು.
ಮದುವೆಯಾಗಿ ಐದು ವರ್ಷ ಕಳೆದಿತ್ತು. ದಂಪತಿ ಮುದ್ದಾದ ಮಕ್ಕಳನ್ನು ಕೂಡ ಹೊಂದಿದ್ದರು. ಆದರೆ, ಇಂದು ಏಕಾಏಕಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದು, ತವರು ಮನೆಯವರಿಗೆ ನಾನಾ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಕಿರುಕುಳದ ಬಗ್ಗೆ ಮಗಳು ಹೇಳಿಕೊಳ್ಳುತ್ತಿದ್ದರು : ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಮೃತ ಅನಿತ ತಾಯಿ ಅಂಜಿನಮ್ಮನವರು, ಇದು ಆತ್ಮಹತ್ಯೆ ಅಲ್ವೇ ಅಲ್ಲ. ಕಿರುಕುಳ ನೀಡಿ ಕೊಲೆ ಮಾಡಲಾಗಿದೆ. ವರದಕ್ಷಿಣೆಗಾಗಿ ಸತತವಾಗಿ ಕಿರುಕುಳ ನೀಡಲಾಗುತ್ತಿತ್ತು. ಪತಿ ಅಶೋಕ್ ಸಾಕಷ್ಟು ಬಾರಿ ಹೊಡೆಯುವುದು, ಬಡಿಯುವುದನ್ನು ಮಾಡ್ತಿದ್ದ. ಸಾಕಷ್ಟು ಬಾರಿ ನಾವು ಮನೆಗೆ ತೆರಳಿ ಬುದ್ಧಿವಾದ ಹೇಳಿದ್ದೇವೆ. ಅನೇಕ ಬಾರಿ ಕಿರುಕುಳದ ಬಗ್ಗೆ ತನ್ನ ಬಳಿ ಹೇಳಿಕೊಳ್ಳುತ್ತಿದ್ದಳು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಅನಿತಾ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದರೂ ತವರು ಮನೆಗೆ ತಿಳಿಸದೆ ಮುಚ್ಚಿಟ್ಟಿದ್ದರು. ಬೇರೆಯವರಿಂದ ವಿಷಯ ತಿಳಿದ ತವರು ಮನೆಯವರು ದಾವಣಗೆರೆ ಜಿಲ್ಲಾಸ್ಪತ್ರೆಯ ಶವಗಾರದ ಮುಂದೆ ಜಮಾಯಿಸಿ ಗೋಳಾಡಿ, ಗಂಡನ ಮನೆಯವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಬೇರೆ ಯುವತಿಯ ಜೊತೆ ಅನೈತಿಕ ಸಂಬಂಧ ಆರೋಪ: ಅಲ್ಲದೆ ಗಂಡನ ಮನೆಯಲ್ಲಿ ಕಿರುಕುಳ ನೀಡುತ್ತಿದ್ದು, ಅನಿತಾ ಕೂಡ ಅವರ ಅಕ್ಕಂದಿರ ಜೊತೆ ಹೇಳಿಕೊಂಡಿದ್ದಳಂತೆ. ಈ ಬಗ್ಗೆ ಪ್ರತಿಕ್ರಿಯಿಸಿದ ಮೃತ ಸಹೋದರಿ ಗೌರಮ್ಮ ಅವರು, ಅನಿತಾಳ ಗಂಡ ಅಶೋಕ್ ಬೇರೆ ಯುವತಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದರು. ಆದ್ದರಿಂದ ನನ್ನ ತಂಗಿಗೆ ಕಿರುಕುಳ ನೀಡಿ, ಸಾಯಿಸಿದ್ದಾರೆ. ತವರು ಮನೆಗೂ ಕಳಿಸುತ್ತಿರಲಿಲ್ಲ. ಇದು ಕೊಲೆ. ಆತ್ಮಹತ್ಯೆ ಅಲ್ಲ ಎಂದು ಆರೋಪ ಮಾಡಿದ್ದಾರೆ.
ಒಟ್ಟಾರೆಯಾಗಿ ಅನಿತಾಳ ಸಾವಿನ ಬಗ್ಗೆ ಸಾಕಷ್ಟು ಅನುಮಾನಗಳು ವ್ಯಕ್ತವಾಗಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಬಸವಪಟ್ಟಣ ಪೊಲೀಸರು ತನಿಖೆ ಕೈಗೊಂಡಿದ್ದು,ತಮ್ಮ ಮಗಳ ಸಾವಿಗೆ ನ್ಯಾಯ ಒದಗಿಸುವಂತೆ ಪೋಷಕರು ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಪತಿ ಹತ್ಯೆ ಮಾಡಿ ಆತ್ಮಹತ್ಯೆ ಕಥೆ ಕಟ್ಟಿದ ಪತ್ನಿ, ಪ್ರಿಯಕರ ಬೆಂಗಳೂರಿನಲ್ಲಿ ಸೆರೆ