ದಾವಣಗೆರೆ: ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚನ್ನೇಶಪುರ ಗ್ರಾಮದಿಂದ ಸ್ವಂತ ಕಾರಿನಲ್ಲಿ ಇಂದು ಮಧ್ಯಾಹ್ನ 12 ಕ್ಕೆ ದೇವಾಲಯಕ್ಕೆ ಹೋಗಿಬರುವುದಾಗಿ ಮನೆ ತೊರೆದ ಶಾಸಕರು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ ಎಂದು ಶಾಸಕರ ಬೆಂಬಲಿಗರ ಮೂಲದಿಂದ ಮಾಹಿತಿ ತಿಳಿದುಬಂದಿದೆ.
ಕೆಎಸ್‌ಡಿಎಲ್‌ಗೆ ರಾಸಾಯನಿಕ ಕಚ್ಚಾ ವಸ್ತುಗಳ ಪೂರೈಕೆಯಲ್ಲಿ ಲಂಚ ಸ್ವೀಕಾರದ ಆರೋಪ ಎದುರಿಸುತ್ತಿರುವ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರು ಒಂದು ವಾರ ಕಾಲ ಯಾರ ಸಂಪರ್ಕಕಕ್ಕೂ ಸಿಕ್ಕಿರಲಿಲ್ಲ. ಬಳಿಕ ಅವರು ತಮ್ಮ ಸ್ವಗ್ರಾಮ ಚನ್ನೇಶಪುರ (ಮಾಡಾಳ್) ಗ್ರಾಮದಲ್ಲಿ ಕಾಣಿಸಿಕೊಂಡಿದ್ದರು.
ನಿರೀಕ್ಷಣಾ ಜಾಮೀನು ಸಿಕ್ಕ ಬಳಿಕ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಸಾಕಷ್ಟು ಅಭಿಮಾನಿಗಳು, ಕಾರ್ಯಕರ್ತರು ಅವರಿಗೆ ಭವ್ಯ ಸ್ವಾಗತ ಕೋರಿ ಅದ್ಧೂರಿ ಮೆರವಣಿಗೆ ಮಾಡಿದ್ದರು. ಇದೀಗ ಶಾಸಕ ಮಾಡಾಳ್ ಅವರು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆಂಬ ಮಾಹಿತಿ ಬಿಜೆಪಿ ಕಾರ್ಯಕರ್ತರ ವಲಯದಿಂದ ಸಿಕ್ಕಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚನ್ನೇಶಪುರ ಗ್ರಾಮದಿಂದ ಸ್ವಂತ ಕಾರಿನಲ್ಲಿ ಇಂದು ಮಧ್ಯಾಹ್ನ 12 ಕ್ಕೆ ದೇವಾಲಯಕ್ಕೆ ಹೋಗಿಬರುವುದಾಗಿ ಮನೆ ತೊರೆದ ಶಾಸಕರು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಇನ್ನು, ಲೋಕಾಯುಕ್ತಕ್ಕೆ 48 ಗಂಟೆಯಲ್ಲಿ ವಿಚಾರಣೆಗೆ ಒಳಗಾಗ್ಬೇಕು ಎಂದು ನ್ಯಾಯಾಲಯದ ಆದೇಶ ಇರುವ ಬೆನ್ನಲ್ಲೇ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ವಿಚಾರಣೆಗೆ ಒಳಗಾಗಲು ಬೆಂಗಳೂರಿನ ಕಡೆ ಪ್ರಯಾಣ ಬೆಳೆಸಿದ್ದಾರೆ.
ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಲೋಕಾಯುಕ್ತ ತನಿಖಾಧಿಕಾರಿಗಳ ಮುಂದೆ ಹಾಜರಾಗುವ ಸಾಧ್ಯತೆ ಇದೆ. ಮಂಗಳವಾರ ಶಾಸಕರಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಕೋರ್ಟ್ ಆದೇಶದ ಪ್ರತಿ ಕೈ ಸೇರಿದ 48 ಗಂಟೆಗಳೊಳಗೆ ತನಿಖಾಧಿಕಾರಿಗಳ ಮುಂದೆ ಹಾಜರಾಗುವಂತೆ ಶಾಸಕರಿಗೆ ಸೂಚಿಸಿತ್ತು.
ನಿನ್ನೆ ಮಾಡಾಳ್ ವಿರೂಪಾಕ್ಷಪ್ಪ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯ ಪೀಠ ನಿರೀಕ್ಷಣಾ ಜಾಮೀನು ನೀಡಿದೆ. ಆದೇಶದ ಪ್ರತಿ ಸಿಕ್ಕ 48 ಗಂಟೆಗಳಲ್ಲಿ ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕು. ಐದು ಲಕ್ಷ ರೂಪಾಯಿಗಳ ಬಾಂಡ್ ನೀಡಬೇಕು. ಸಾಕ್ಷ್ಯಾಧಾರಗಳ ನಾಶಕ್ಕೆ ಮುಂದಾಗಬಾರದು ಎಂಬ ಷರತ್ತುಗಳನ್ನು ವಿಧಿಸಿತ್ತು.
ಯಾವುದೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ ದೋಷಮುಕ್ತವಾಗಿ ಬರುತ್ತೇನೆ: ಬೆಂಗಳೂರಲ್ಲಿ ಸಿಕ್ಕಿರುವ ಹಣಕ್ಕೂ ನನಗೆ ಸಂಬಂಧವಿಲ್ಲ, ನಾನು ಇದರಿಂದ ದೋಷಮುಕ್ತವಾಗಿ ಬರುತ್ತೇನೆಂದು ಎಂದು ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರು ಕಣ್ಣೀರು ಹಾಕಿದ್ದರು. ಮಂಗಳವಾರ ಚನ್ನಗಿರಿ ತಾಲೂಕಿನ ಚನ್ನೇಶಪುರ ಗ್ರಾಮದಲ್ಲಿ ಮಾತನಾಡಿದ್ದ ಅವರು, ನನ್ನ ಮೇಲೆ ಆರೋಪ ಬಂದಿದೆ, ಅದರಿಂದ ನಾನು ನೂರಕ್ಕೆ ನೂರು ದೋಷಮುಕ್ತವಾಗುತ್ತೇನೆ. ನಾನು ಯಾವುದೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ, ಬೆಂಗಳೂರಲ್ಲಿ ಸಿಕ್ಕಿರುವ ಹಣಕ್ಕೂ ನನಗೆ ಸಂಬಂಧವಿಲ್ಲ, ನಾನು ಇದರಿಂದ ದೋಷಮುಕ್ತವಾಗಿ ಬರುತ್ತೇನೆ, ನಮ್ಮದು 125 ಎಕರೆ ಅಡಿಕೆ ತೋಟವಿದ್ದು, ಅದರ ಆದಾಯವಿದೆ. ಲೋಕಾಯುಕ್ತ ದಾಳಿ ಹಿಂದೆ ಯಾರ ಕೈವಾಡವಿದೆ ಎಂದು ನಾನು ಹೇಳಲಾರೆ ಎಂದಿದ್ದರು.
ಇದನ್ನೂಓದಿ:ವಿರೂಪಾಕ್ಷಪ್ಪ ಲಂಚ ಪ್ರಕರಣದಲ್ಲಿ ಸರ್ಕಾರದ ಹೈಡ್ರಾಮಾ: ಹೆಚ್.ವಿಶ್ವನಾಥ್