ಬಂಟ್ವಾಳ: ಮಂಗಳೂರಿನಿಂದ ಕಾಲ್ನಡಿಗೆಯಲ್ಲಿ ಬೆಂಗಳೂರಿನ ಮೂಲಕ ಜಾರ್ಖಂಡ್ಗೆ ಮಂಗಳವಾರ ರಾತ್ರಿ ಹೊರಟ ಸುಮಾರು 1 ಸಾವಿರಕ್ಕೂ ಮಿಕ್ಕಿ ವಲಸೆ ಕಾರ್ಮಿಕರಿಗೆ ಬಂಟ್ವಾಳ ಬಂಟರ ಭವನದಲ್ಲಿ ಆಶ್ರಯ ನೀಡಲಾಗಿದೆ.
ಲಾಕ್ಡೌನ್ನಿಂದ ಮಂಗಳೂರಿನ ವಿವಿಧ ಭಾಗಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜಾರ್ಖಂಡ್ ರಾಜ್ಯದ ಸುಮಾರು 1000ಕ್ಕೂ ಅಧಿಕ ಕಾರ್ಮಿಕರು ಮಂಗಳೂರಿನಿಂದ ಕಾಲ್ನಡಿಗೆಯಲ್ಲಿ ತಮ್ಮ ರಾಜ್ಯಕ್ಕೆ ತೆರಳುವುದಾಗಿ ಮಂಗಳವಾರ ರಾತ್ರಿ 9 ಗಂಟೆಯ ಸುಮಾರಿಗೆ ಹೊರಟಿದ್ದರು. ಈ ಬಗ್ಗೆ ವಿಷಯ ತಿಳಿದ ಅಧಿಕಾರಿಗಳು ಮಾರ್ಗ ಮಧ್ಯೆ ಕಾರ್ಮಿಕರನ್ನು ತಡೆದು ಮನವೊಲಿಸಲು ಶತ ಪ್ರಯತ್ನ ಪಟ್ಟರೂ ಅಧಿಕಾರಿಗಳ ಮಾತುಗಳನ್ನೂ ಲೆಕ್ಕಿಸದೇ ತಮ್ಮ ಪ್ರಯಾಣವನ್ನ ಮುಂದುವರಿಸಿದ್ದರು. ಹೀಗೆ ದಾರಿ ಮಧ್ಯೆ ಸಾಗುತ್ತಿದ್ದ ಕಾರ್ಮಿಕರಿಗೆ ಅಲ್ಲಲ್ಲಿ ಸ್ಥಳೀಯರು ಹಣ್ಣು ಹಂಪಲು, ಆಹಾರ ಪದಾರ್ಥಗಳನ್ನು ಒದಗಿಸಿದರು.
ಸುದ್ದಿ ತಿಳಿದ ಮಂಗಳೂರಿನ ಶಾಸಕ ವೇದವ್ಯಾಸ ಕಾಮತ್, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರನ್ನು ಸಂಪರ್ಕಿಸಿ ಬಳಿಕ ಬಂಟರ ಸಂಘದ ಅಧ್ಯಕ್ಷ ವಿವೇಕ್ ಶೆಟ್ಟಿ ನಗ್ರಿಗುತ್ತು ಮತ್ತು ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ರಂಗೋಲಿ ಅವರ ಮೂಲಕ ಬಂಟ್ವಾಳ ಬಂಟರ ಭವನದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಡಲಾಯಿತು. ವೇದವ್ಯಾಸ ಕಾಮತ್ ಅವರು ನಿನ್ನೆ ರಾತ್ರಿಯ ಊಟದ ವ್ಯವಸ್ಥೆ ಕಲ್ಪಿಸಿದರೆ, ಬುಧವಾರದಿಂದ ಎಲ್ಲರಿಗೂ ಊಟ, ಉಪಾಹಾರದ ವ್ಯವಸ್ಥೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ವೈಯಕ್ತಿಕ ನೆಲೆಯಲ್ಲಿ ಒದಗಿಸುವ ಭರವಸೆ ನೀಡಿದರು.
ಬಳಿಕ ಸ್ಥಳಕ್ಕೆ ಆಗಮಿಸಿದ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್, ಡಿವೈಎಸ್ಪಿ ವೆಲಂಟೈನ್ ಡಿಸೋಜಾ, ತಾ.ಪಂ. ಇಒ ರಾಜಣ್ಣ, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು ಅವರೊಂದಿಗೆ ಮಾತುಕತೆ ನಡೆಸಿದ ಶಾಸಕ ರಾಜೇಶ್ ನಾಯ್ಕ್ ಆಗಮಿಸಿದ ಅಷ್ಟೂ ಕಾರ್ಮಿಕರಿಗೆ ಅಭಯ ನೀಡಿ, ಅವರಿಗೆ ವೈದ್ಯಕೀಯ ತಪಾಸಣೆ, ದಾಖಲೆ ಪರಿಶೀಲಿಸಿ, ಪ್ರತ್ಯೇಕ ತಂಡಗಳನ್ನಾಗಿ ಬೇರ್ಪಡಿಸಿ, ರೈಲಿನಲ್ಲಿ ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ.