ಮಂಗಳೂರು : ಸನ್ಮಾರ್ಗದಲ್ಲಿ ನಾನು ಶ್ರಮಪಟ್ಟು ಉದ್ಯಮ ನಡೆಸಿ ಹಣ ಗಳಿಸಿದ್ದು, ಅದನ್ನು ಸತ್ಕಾರ್ಯದಲ್ಲಿ ವಿನಿಯೋಗಿಸಲು ಬಯಸಿ ಇಂದು ಅಶಕ್ತರಿಗೆ ಸಣ್ಣ ಮೊತ್ತದ ಧನ ಸಹಾಯ ಮಾಡಿ ಅಳಿಲುಸೇವೆ ಮಾಡುತ್ತಿದ್ದೇನೆ.
ನಮ್ಮ ಸಾವಿರಾರು ನೌಕರರು ದುಡಿದಿದ್ದರ ಫಲವಾಗಿ ನನ್ನ ಸಂಸ್ಥೆ ಉದ್ಧಾರವಾಗಿದೆ. ಈ ಮೂಲಕ ಇಂದು ನನಗೆ ಸಹಾಯಧನ ಕೊಡಲು ಅನುಕೂಲವಾಗಿದೆ ಎಂದು ಎಂಜಿಆರ್ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್ ಕೆ.ಶೆಟ್ಟಿ ಹೇಳಿದರು.
ನಗರದ ಬಂಗ್ರಕೂಳೂರಿನ ಗೋಲ್ಡ್ ಪಿಂಚ್ ಮೈದಾನದಲ್ಲಿ ಎಂಜಿಆರ್ ಗ್ರೂಪ್ ಸಂಸ್ಥೆಯ ವತಿಯಿಂದ ಸತ್ಪಾತ್ರರಿಗೆ ಸಹಾಯಧನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ನನ್ನ ಜನ್ಮ ಸಾರ್ಥಕವಾಯಿತು ಎಂಬ ಧನ್ಯತೆ ಮೂಡುತ್ತಿದೆ ಎಂದು ಹೇಳಿದರು.
ಇದನ್ನು ಓದಿ: ರಾತ್ರಿ 12.45ರ ಸುಮಾರಿಗೆ ನೆಟ್ವರ್ಕ್ ಮೂಲಕ ಪೊಲೀಸರು ಪತ್ತೆ ಹಚ್ಚಿದ್ರು : ಸಿ ಟಿ ರವಿ
ನಾನು 1959ರಲ್ಲಿ ಹುಟ್ಟಿದ್ದು, ಆ ಬಳಿಕ 20 ವರ್ಷಗಳ ಕಾಲ ನಾನು ಬಹಳ ಕಷ್ಟ ಪಟ್ಟಿದ್ದೆ. ಅಂದು ನಾನು ನನ್ನಂತೆ ಇರುವ ಅಶಕ್ತರಿಗೆ ಸಹಾಯ ಮಾಡಬೇಕೆಂದು ಸಂಕಲ್ಪ ಮಾಡಿದ್ದೆ. 1983ರಲ್ಲಿ ಬೆಂಗಳೂರು ಸೇರಿ ಕಷ್ಟಪಟ್ಟು ದುಡಿದೆ. 1993ರಲ್ಲಿ ನನ್ನ ಕಷ್ಟದ ದಿನಗಳ ಫಲಿತಾಂಶ ದೊರಕಲಾರಂಭಿಸಿತು. ಇಂದು ಸುಮಾರು 400 ಮಂದಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಣ್ಣ ಮೊತ್ತ ನೀಡಿದ್ದೇನೆ.
ನೀವು ಮುಂದಿನ ದಿನಗಳಲ್ಲಿ ನಾನು ಈ ವೇದಿಕೆಯಲ್ಲಿ ನಿಂತು ಮಾತನಾಡಿದಂತೆ ನಿಮಗೂ ಅವಕಾಶವಿದೆ. ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ಕಷ್ಟ ಎಲ್ಲರಿಗೂ ಬರುತ್ತದೆ. ಆದರೆ, ಅದನ್ನು ಎದುರಿಸಿ ಮುನ್ನುಗ್ಗುವ ಛಲ ಇದ್ದಲ್ಲಿ ಎಲ್ಲವೂ ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಯ ಸುಮಾರು 800 ಮಂದಿ ಬಡ, ಅಶಕ್ತ, ನಿರ್ಗತಿಕ ರೋಗಿಗಳು, ಅಂಗವಿಕಲರು, ಮಾನಸಿಕ ಅಸ್ವಸ್ಥರು, ಸೇರಿ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಇನ್ನೂ ಹಲವಾರು ಸಮಸ್ಯೆಗಳಲ್ಲಿ ಬಳಲುವವರಿಗೆ 1 ಕೋಟಿ ರೂ. ಧನ ಸಹಾಯ ಮಾಡಿದರು.