ಮಂಗಳೂರು: ತನ್ನ ಅಲೌಕಿಕ ಶಕ್ತಿಯಿಂದ ಭಕ್ತರ ಖಾಯಿಲೆಗಳನ್ನು ಶಮನ ಮಾಡುವೆ, ಭವಿಷ್ಯ - ಭೂತಗಳನ್ನು ಹೇಳುವೆ ಎಂದು ಹೇಳುತ್ತಿರುವ ಸ್ವಯಂ ಘೋಷಿತ ದೇವಮಾನವ ಧೀರೇಂದ್ರ ಶಾಸ್ತ್ರಿ ಅಕಾ ಬಾಗೇಶ್ವರ ಧಾಮ್ ಬಾಬಾ ತಾನು ಕೇಳುವ ಮೂರು ಪ್ರಶ್ನೆಗಳಿಗೆ ಸರಿಯಾದ ಉತ್ತರ ಹೇಳಿದಲ್ಲಿ 10 ಲಕ್ಷ ರೂ. ಬಹುಮಾನವನ್ನು ನೀಡುವೆ ಎಂದು ಖ್ಯಾತ ವಿಚಾರವಾದಿ ನರೇಂದ್ರ ನಾಯಕ್ ಸವಾಲೆಸೆದಿದ್ದಾರೆ.
ಸ್ವಯಂ ಘೋಷಿತ ದೇವಮಾನವ ಧೀರೇಂದ್ರ ಶಾಸ್ತ್ರಿ ಬಾಬಾ ಜೂನ್ 11 ರಿಂದ 15 ರವರೆಗೆ ಬೆಂಗಳೂರಿಗೆ ಬರಲಿದ್ದು, 'ಹನುಮಾನ್ ಕಥಾ' ಕಾರ್ಯಕ್ರಮ ನಡೆಸಲಿದ್ದಾರೆ. ಈ ವೇಳೆ ಅವರು ಪವಾಡಗಳನ್ನು ಮಾಡಲಿದ್ದಾರೆ ಎನ್ನಲಾಗಿದ್ದು, ಇದನ್ನು ತಾನು ಪರೀಕ್ಷಿಸುವುದಾಗಿ ಅವರು ಹೇಳಿದ್ದಾರೆ.
ಆದರೆ, ಈ ಪರೀಕ್ಷೆಯನ್ನು ಅವರ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಮಾಡದೇ ಪ್ರತ್ಯೇಕ ಸ್ಥಳದಲ್ಲಿ ಮಾಡಲು ನರೇಂದ್ರ ನಾಯಕ್ ಬಯಸಿದ್ದಾರೆ. ಈ ಸಂದರ್ಭ ಬಾಬಾರವರ ಜನರ ಪೂರ್ವಾಪರಗಳನ್ನು ತಿಳಿಸುವ, ರೋಗಗಳನ್ನು ಗುಣಪಡಿಸುವ ಶಕ್ತಿ ಮತ್ತು ಸರ್ವಜ್ಞತೆಯ ಸಾಮರ್ಥ್ಯವನ್ನು ನರೇಂದ್ರ ನಾಯಕ್ ಪರೀಕ್ಷಿಸಲು ಬಯಸಿದ್ದಾರೆ. ಪರೀಕ್ಷೆಯ ಸಂದರ್ಭ ಧೀರೇಂದ್ರ ಶಾಸ್ತ್ರಿ ಬಾಬಾ ನಾವು ಕರೆತರುವ ಐವರ ಬಗ್ಗೆ ಸರಿಯಾದ ವಿವರ ನೀಡಬೇಕು. ಈ ವಿವರಗಳು ಪ್ರಶ್ನೆಗಳ ರೂಪದಲ್ಲಿರುತ್ತವೆ.
ಅದೇ ರೀತಿ ನಾವು ಆಯ್ಕೆಮಾಡಿರುವ ಓರ್ವ ವ್ಯಕ್ತಿಯ ನಿರ್ದಿಷ್ಟ ರೋಗ ಹಾಗೂ ವಿರೂಪತೆಯನ್ನು ಗುಣಪಡಿಸಬೇಕು. ಮೂರನೆಯದಾಗಿ ಸೀಲ್ಡ್ ಕವರ್ನಲ್ಲಿದ್ದ ಕರೆನ್ಸಿ ನೋಟಿನ ಸಂಖ್ಯೆಯನ್ನು ಅವರ ತ್ರಿಕಾಲ ಜ್ಞಾನದ ಶಕ್ತಿಯಿಂದ ತಿಳಿಸಬೇಕು. ಅವರು ಸಂಖ್ಯೆಯನ್ನು ತಿಳಿಸಿದ ಬಳಿಕ ಪರಿಶೀಲಿಸಲು ಲಕೋಟೆ ತೆರೆಯಲಾಗುತ್ತದೆ. ಈ ಮೂರು ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದ್ದಲ್ಲಿ 10 ಲಕ್ಷ ರೂ. ಗಳನ್ನು ನೀಡಲಾಗುತ್ತದೆ ಎಂದು ಸವಾಲು ಹಾಕಲಾಗಿದೆ.
ನರೇಂದ್ರ ನಾಯಕ್ ಅವರು ಈವರೆಗೆ ಹಲವಾರು ಸವಾಲುಗಳನ್ನು ಹಾಕಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಜ್ಯೋತಿಷಿಗಳಿಗೆ ಸೇರಿದಂತೆ ಸಂದರ್ಭಕ್ಕನುಗುಣವಾಗಿ ಹಲವು ಸವಾಲುಗಳನ್ನು ಹಾಕಿದ್ದಾರೆ. ಆದರೆ, ಈವರೆಗೆ ಯಾವ ಪವಾಡ ಪುರುಷರೂ, ದೇವಮಾನವರೂ, ಜ್ಯೋತಿಷಿಗಳು ಅವರ ಸವಾಲನ್ನು ಸ್ವೀಕರಿಸಿ ಗೆಲುವು ಸಾಧಿಸಿಲ್ಲ.
ಈ ಬಗ್ಗೆ ಮಾತನಾಡಿದ ನರೇಂದ್ರ ನಾಯಕ್, ದೇವಮಾನವ ಧೀರೇಂದ್ರ ಶಾಸ್ತ್ರಿ ಅಕಾ ಬಾಗೇಶ್ವರ ಧಾಮ್ ಬಾಬಾ ಸಣ್ಣ ಪ್ರಾಯದವರಾಗಿದ್ದಾರೆ. ಅವರು ತಮ್ಮ ಪವಾಡಗಳಿಂದ ಉತ್ತರ ಪ್ರದೇಶದಲ್ಲಿ ಖ್ಯಾತರಾಗಿದ್ದಾರೆ. ಆದರೆ, ಅವರ ಪವಾಡವನ್ನು ನಾನು ವೈಜ್ಞಾನಿಕವಾಗಿ ಪರೀಕ್ಷಿಸಬೇಕಾಗಿದೆ. ಈ ಕಾರಣದಿಂದ ಅವರು ಬೆಂಗಳೂರಿಗೆ ಬರುವ ಸಂದರ್ಭದಲ್ಲಿ ಅವರ ಪರೀಕ್ಷೆ ನಡೆಸಲು ತಯಾರಿದ್ದೇನೆ.
ಆದರೆ, ಬೆಂಗಳೂರಿನಲ್ಲಿ ನಡೆಸುವ ಕಾರ್ಯಕ್ರಮದಲ್ಲಿ ಈ ಪರೀಕ್ಷೆ ನಡೆಸುವುದಿಲ್ಲ. ಬೆಂಗಳೂರಿನ ಬೇರೆ ಯಾವುದಾದರೂ ಸಭಾಂಗಣದಲ್ಲಿ ಅಥವಾ ಟಿ ವಿ ಸ್ಟುಡಿಯೋದಲ್ಲಿ ಈ ಪರೀಕ್ಷೆ ನಡೆಸಲು ಸಿದ್ದನಿದ್ದೇನೆ. ಬಾಬಾ ನನ್ನ ಮೂರು ಸವಾಲುಗಳಿಗೆ ಉತ್ತರಿಸಿದರೆ 10 ಲಕ್ಷ ರೂ ಬಹುಮಾನವನ್ನು ಕೊಡುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಾನು ಸಂತನಲ್ಲ, ಸರಳ ವ್ಯಕ್ತಿ.. ಮದುವೆ ಬಗ್ಗೆ ಧೀರೇಂದ್ರ ಶಾಸ್ತ್ರಿ ಅಚ್ಚರಿ ಹೇಳಿಕೆ