ಮಂಗಳೂರು: 60 ವಯಸ್ಸು ದಾಟಿದರೆ ಅದು ನಿವೃತ್ತಿ ವಯಸ್ಸೆಂದು ಅನೇಕರು ಮನೆಯೊಳಗೆ ಬೆಚ್ಚಗೆ ಕುಳಿತು ಬಿಡುತ್ತಾರೆ. ಅಂಥದ್ರಲ್ಲಿ ಹರಿಯಾಣ ರಾಜ್ಯದ 63 ವರ್ಷದ ಈ ಮಹಿಳೆ, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಸೈಕಲ್ನಲ್ಲಿಯೇ ಪ್ರಯಾಣಿಸುವ ಸಾಹಸದ ಕೆಲಸಕ್ಕೆ ಕೈ ಹಾಕಿದ್ದಾರೆ.
ಇವರ ಹೆಸರು ಕಮಲೇಶ್ ರಾಣಾ. 2005ರಿಂದ ಯೋಗ ಮತ್ತು ಅಥ್ಲೆಟಿಕ್ನಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ಮಲೇಶಿಯಾದಲ್ಲಿ ನಡೆದ ಏಷ್ಯನ್ ಮಾಸ್ಟರ್ ಅಥ್ಲೆಟಿಕ್ ಮೀಟ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಮಧುಮೇಹ ಕಾರಣದಿಂದಾಗಿ 2019ರಲ್ಲಿ ಸೈಕ್ಲಿಂಗ್ ಆರಂಭಿಸಿದ ರಾಣ, ಸೈಕ್ಲಿಂಗ್ ಮೂಲಕವೇ ಮಧುಮೇಹ ನಿಯಂತ್ರಿಸಲು ಪ್ರಯತ್ನಿಸಿದರು. ಇದೀಗ ಸೈಕ್ಲಿಂಗ್ ಮಾಡುವುದರಿಂದ ಮಧುಮೇಹ ನಿಯಂತ್ರಣ ಸಾಧ್ಯವಿದೆ ಎಂಬುದನ್ನೂ ಅರಿತಿದ್ದಾರೆ.
ಸೈಕಲ್ ತುಳಿಯುವ ಮೂಲಕ ಆರೋಗ್ಯವಾಗಿರಿ (Keeping fit through cycle) ಎನ್ನುವ ಸಂದೇಶದೊಂದಿಗೆ ಸೆಪ್ಟೆಂಬರ್ 26ರಂದು ಕಾಶ್ಮೀರದಿಂದ ಕನ್ಯಾಕುಮಾರಿಗೆ ಸೈಕಲ್ ಯಾತ್ರೆ ಕೈಗೊಂಡಿದ್ದರು. ಒಟ್ಟು 4,500 ಕಿ.ಮೀ ಪ್ರಯಾಣದ ಗುರಿ ಹೊಂದಿದ್ದಾರೆ. ಇದೀಗ ಕಾಶ್ಮೀರದಿಂದ ಮಂಗಳೂರಿಗೆ ತಲುಪಿರುವ ಕಮಲೇಶ್ ರಾಣ ಈಗಾಗಲೇ 3,600 ಕಿ.ಮೀ ಪ್ರಯಾಣ ಪೂರೈಸಿದ್ದಾರೆ.
ಇವರು ಸೈಕಲ್ ಯಾತ್ರೆ ಶುರು ಮಾಡಿದ ದಿನವೇ ಶ್ರೀನಗರದಿಂದ ವಿಕಾಸ್ ಎಂಬ ಉತ್ತರಪ್ರದೇಶದ ಯುವಕ ಹವಾಮಾನ ಬದಲಾವಣೆ ಬಗ್ಗೆ ಜಾಗೃತಿ ಮೂಡಿಸಲು ಸೈಕಲ್ ಯಾತ್ರೆ ಆರಂಭಿಸಿದ್ದರು. ಯಾತ್ರೆ ಆರಂಭಿಸಿ 30 ಕಿ.ಮೀ ದೂರದಲ್ಲಿ ಪರಸ್ಪರ ಭೇಟಿಯಾಗಿದ್ದರು. ಬಳಿಕ ಇಬ್ಬರೂ ಜೊತೆಗೂಡಿ ಸೈಕಲ್ನಲ್ಲಿ ಒಂದೇ ದಾರಿಯಲ್ಲಿ ಪ್ರಯಾಣ ಮುಂದುವರಿಸಿದ್ದಾರೆ. ಮುಂಬೈತನಕವೂ ಒಟ್ಟಿಗೆ ಪ್ರಯಾಣಿಸಿದ್ದರು.
ಮಂಗಳೂರಿನಲ್ಲಿ ಅಪಘಾತ: ಮುಂಬೈನಿಂದ ವಿಕಾಸ್ ಅವರನ್ನು ಬಿಟ್ಟು ಒಬ್ಬರೇ ಪ್ರಯಾಣ ಬೆಳಸಿದ ಕಮಲೇಶ್ ರಾಣಾರಿಗೆ ಮಂಗಳೂರಿನಲ್ಲಿ ಅಪಘಾತವಾಗಿದೆ. ಡಿಸೆಂಬರ್ 20ರಂದು ಮಂಗಳೂರಿನ ಖಾಸಗಿ ಬಸ್ಸೊಂದು ಸೈಕಲ್ಗೆ ಡಿಕ್ಕಿ ಹೊಡೆದಿದೆ. ಇದರಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇದೀಗ ಮಾಜಿ ಪತ್ರಕರ್ತ ನಂದಗೋಪಾಲ ಎಂಬುವವರ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಅಪಘಾತದ ಸುದ್ದಿ ಕೇಳಿ ಮಧ್ಯಪ್ರದೇಶದ ಯುವಕ ವಿಕಾಸ್ ಭಟ್ಕಳದಿಂದ ಮಂಗಳೂರಿಗೆ ಪ್ರಯಾಣಿಸಿ ರಾಣ ಅವರನ್ನು ವಿಚಾರಿಸಲು ಸೈಕಲ್ನಲ್ಲಿ 200 ಕಿ.ಮೀ ಪ್ರಯಾಣಿಸಿದ್ದಾರೆ.
ಮತ್ತೆ ಕನ್ಯಾಕುಮಾರಿಗೆ ಹೋಗುವ ಛಲ: ಕಮಲೇಶ್ ರಾಣಾ ಅವರಿಗೆ ಅಪಘಾತವಾಗಿ ಕೈ ಮೂಳೆ ಮುರಿತವಾಗಿದೆ. ಸೈಕಲ್ ಹ್ಯಾಂಡಲ್ ಹಿಡಿಯಬೇಕಾದ ಕೈಗೆ ಬ್ಯಾಂಡೇಜ್ ಬಿದ್ದಿದೆ. ಕೈ ಗುಣಮುಖವಾದ ಬಳಿಕ ಮತ್ತೆ ಕನ್ಯಾಕುಮಾರಿಗೆ ಸೈಕಲ್ ಪ್ರಯಾಣ ಬೆಳೆಸುವ ಇಚ್ಚೆ ಅವರದ್ದು. ಕೆಲವು ದಿನಗಳ ವಿಶ್ರಾಂತಿಯ ಬಳಿಕ ಮತ್ತೆ ಪ್ರಯಾಣ ಮುಂದುವರಿಸಿ ಇವರು ಗುರಿ ತಲುಪಲಿದ್ದಾರೆ.
ಈ ಬಗ್ಗೆ ಮಾತನಾಡಿದ ಕಮಲೇಶ್ ರಾಣಾ, 'ಫಿಟ್ನೆಸ್ ಬಗ್ಗೆ ಜಾಗೃತಿ ಮೂಡಿಸುತ್ತಾ ಸೈಕಲ್ ಯಾತ್ರೆ ಮಾಡುತ್ತಿದ್ದೇನೆ. ಅಪಘಾತವಾದಾಗ ನಂದಗೋಪಾಲ ಕುಟುಂಬ ತಮ್ಮ ಮನೆಯಲ್ಲಿ ವಿಶ್ರಾಂತಿಗೆ ವ್ಯವಸ್ಥೆ ಮಾಡಿದ್ದಾರೆ. ಗುಣಮುಖವಾದ ಬಳಿಕ ಮತ್ತೆ ಸೈಕಲ್ ಯಾತ್ರೆ ಮುಂದುವರಿಸುತ್ತೇನೆ' ಎಂದರು.
ವಿಕಾಸ್ ಜೈ ಮಾತನಾಡಿ, 'ಹವಾಮಾನ ವೈಪರೀತ್ಯ ಬಗ್ಗೆ ಜಾಗೃತಿ ಮೂಡಿಸಲು ನಾನು ಸೈಕ್ಲಿಂಗ್ ಆರಂಭಿಸಿದೆ. ಆರಂಭದ ದಿನವೇ ಕಮಲೇಶ್ ರಾಣಾ ಅವರು ಜೊತೆಯಾದರು. ಇಲ್ಲಿಯವರೆಗೆ ಜೊತೆಯಾಗಿ ಸೈಕ್ಲಿಂಗ್ ಮಾಡಿದ್ದೇವೆ. ಅವರು ಗುಣಮುಖವಾದ ನಂತರ ಒಟ್ಟಿಗೆ ಈ ಯಾತ್ರೆ ಮುಂದುವರಿಸುತ್ತೇವೆ' ಎಂದು ತಿಳಿಸಿದರು.
ಇಬ್ಬರು ಸೈಕ್ಲಿಸ್ಟ್ಗಳಿಗೆ ತಮ್ಮ ಮನೆಯಲ್ಲಿ ಆಶ್ರಯ ನೀಡಿರುವ ಮಂಗಳೂರಿನ ಸಚಿತಾ ನಂದಗೋಪಾಲ ಮಾತನಾಡಿ, 'ಇಬ್ಬರಿಗೂ ಮನೆಯಲ್ಲಿ ವಿಶ್ರಾಂತಿಗೆ ವ್ಯವಸ್ಥೆ ಮಾಡಿರುವುದು ನಮಗೆ ಖುಷಿ ಕೊಟ್ಟಿದೆ. ಮನೆಯಲ್ಲಿ ದಕ್ಷಿಣ ಭಾರತ ಮತ್ತು ಉತ್ತರ ಭಾರತದ ಆಹಾರ ತಿನಿಸುಗಳ ಸಮ್ಮಿಲನ ನಡೆದಿದೆ. ನಮಗೆ ಅವರು ಅಪರಿಚಿತರಂತೆ ಅನ್ನಿಸಲೇ ಇಲ್ಲ. ನಮ್ಮ ಮನೆಯವರಂತಿದ್ದಾರೆ' ಎಂದು ಖುಷಿ ವ್ಯಕ್ತಪಡಿಸಿದರು.
ವಿಭಿನ್ನ ಸಂದೇಶದೊಂದಿಗೆ ಹೊರಟಿರುವ 63 ವರ್ಷದ ಹರಿಯಾಣದ ಮಹಿಳೆ ಹಾಗು ಉತ್ತರ ಪ್ರದೇಶದ 30 ವರ್ಷದ ಯುವಕನ ಸೈಕಲ್ ಯಾತ್ರೆಗೆ ಶುಭವಾಗಲಿ.
ಇದನ್ನೂ ಓದಿ: ಹೊಸ ವರ್ಷದ ನಿಮಿತ್ತ 2 ಲಕ್ಷ ತಿರುಪತಿ ಮಾದರಿ ಲಾಡು ವಿತರಣೆ