ಚಿತ್ರದುರ್ಗ: ಪ್ರತಿಯೊಂದು ಕಾಲೇಜುಗಳಲ್ಲಿ ಕ್ಯಾಂಟೀನ್ಗಳನ್ನು ತೆರೆಯುವ ಮೂಲಕ, ಬಡ ವಿದ್ಯಾರ್ಥಿಗಳಿಗೆ ಊಟ ಹಾಗೂ ಉಪಹಾರದ ವ್ಯವಸ್ಥೆ ಮಾಡುವಂತೆ ವಿದ್ಯಾರ್ಥಿಗಳು ಅಭಿಯಾನದ ಮೂಲಕ ಒತ್ತಾಯಿಸಿದರು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ, ಯುವಜನರ ಆರೋಗ್ಯದ ಅರಿವಿನ ಅಭಿಯಾನದಲ್ಲಿ ತಮ್ಮ ಬೇಡಿಕೆಯನ್ನು ಸರ್ಕಾರಕ್ಕೆ ತಿಳಿಸಿದರು.
ಗ್ರಾಮೀಣ ಮತ್ತು ನಗರಭಾಗದಿಂದ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಮಧ್ಯಾಹ್ನದ ಊಟವಿಲ್ಲದೇ, ಸಂಜೆಯವರೆಗೂ ಹಸಿವಿನಿಂದ ಪಾಠ ಕಲಿಯಬೇಕಾದ ಸ್ಥಿತಿಯಿದೆ. ಇದರಿಂದ ವಿದ್ಯಾರ್ಥಿಗಳು ಸಾಕಷ್ಟು ಮಾನಸಿಕ ಮತ್ತು ದೈಹಿಕ ಆರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಪ್ರತಿ ಕಾಲೇಜುಗಳಲ್ಲಿ ಕ್ಯಾಂಟೀನ್ಗಳ ಮೂಲಕ ಉಚಿತವಾಗಿ ಮಧ್ಯಾಹ್ನದ ಬಿಸಿಯೂಟ ವ್ಯವಸ್ಥೆಗೊಳಿಸಬೇಕು ಎಂದು ಒತ್ತಾಯಿಸಿದರು.
ಇನ್ನು ಯುವಕರು ದುಶ್ಚಟದಂತಹ ವ್ಯಸನಗಳಿಂದ ದೂರವಿರಬೇಕು. ಪೌಷ್ಟಿಕವಾದ ಹಾಗೂ ವಿಷಮುಕ್ತ ಸಿರಿ ಧಾನ್ಯಗಳ ಆಹಾರವನ್ನು ಸೇವಿಸಿ, ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಅಭಿಯಾನದ ಮೂಲಕ ಅರಿವು ಮೂಡಿಸಲಾಯಿತು. ಅಭಿಯಾನವನ್ನು ಜಿಲ್ಲಾಧಿಕಾರಿ ಶ್ಲಾಘಿಸಿದ್ದು, ಶಾಸಕ ತಿಪ್ಪಾರೆಡ್ಡಿಯವರು ಮಧ್ಯಾಹ್ನದ ಊಟದ ವ್ಯವಸ್ಥೆಗೊಳಿಸುವ ಬಗ್ಗೆ, ಸರ್ಕಾರದೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದರು.