ಬೀದರ್: ಮೂರು ದಿನಗಳ ಕಾಲ ನಡೆಯಲಿರುವ ರಾಜ್ಯ ಮಟ್ಟದ ಪಶು ಮೇಳಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿದ್ಯುಕ್ತವಾಗಿ ಚಾಲನೆ ನೀದಿದ್ದಾರೆ. ಇದೇ ವೇಳೆ ರೈತರಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ.
ಇಲ್ಲಿನ ನಂದಿನಗರದಲ್ಲಿ ಪಶು ವೈದ್ಯಕೀಯ ಮತ್ತು ಮೀನುಗಾರಿಕೆ ವಿಶ್ವ ವಿದ್ಯಾಲಯದಲ್ಲಿ ಆಯೋಜಿಸಿದ್ದ ಮೇಳ ಉದ್ಘಾಟನೆ ಬಳಿಕ ಮಾತನಾಡಿದ ಅವರು, ಪಶು ಸಂಗೋಪನೆ ಮತ್ತು ಪಾಲನೆ ವಿಚಾರದಲ್ಲಿ ಸರ್ಕಾರ ಕಾಳಜಿ ವಹಿಸಿದೆ. ರಾಜ್ಯದಲ್ಲಿ ಎಲ್ಲೆಡೆ ಮಳೆಯಾಗಿತ್ತು. ಆದರೆ ಬೀದರ್ ಭಾಗದಲ್ಲಿ ಮಳೆ ಕಡಿಮೆಯಾಗಿದ್ದಕ್ಕೆ ನೀರಿನ ಸಮಸ್ಯೆ ಎದುರಾಗಿದೆ ಎಂದರು.
ತೊಗರಿ ಬೆಂಬಲ ಬೆಲೆ ಖರೀದಿ ಮಾಡಲು ಸರ್ಕಾರ ಮುಂದಾಗಿದ್ದು, ಈಗಾಗಲೇ ಬೆಂಬಲ ಬೆಲೆಯೊಂದಿಗೆ 10 ಕ್ವಿಂಟಾಲ್ ತೊಗರಿ ಖರೀದಿಸುತ್ತಿದ್ದು, ಅದನ್ನು 20 ಕ್ವಿಂಟಾಲ್ಗೆ ಹೆಚ್ಚಿಸಲಾಗುವುದು. ಕಷ್ಟದಲ್ಲಿರುವ ತೊಗರಿ ಬೆಳೆಗಾರರ ನೋವಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸರ್ಕಾರದ ಬೊಕ್ಕಸಕ್ಕೆ ನಷ್ಟವಾದರೂ ಪರವಾಗಿಲ್ಲ. ಇಂದಿನಿಂದಲೇ ತೊಗರಿಯನ್ನು ಬೆಂಬಲ ಬೆಲೆಯೊಂದಿಗೆ ಖರೀದಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಅಭಯ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್, ಸಂಸದ ಭಗವಂತ ಖೂಬಾ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸೇರಿದಂತೆ ಶಾಸಕರು, ಮುಖಂಡರು ಉಪಸ್ಥಿತರಿದ್ದರು.