ಬೆಳಗಾವಿ: ಛತ್ರಪತಿ ಶಿವಾಜಿ ಮಹಾರಾಜರ ಮೂಲವೇ ಕನ್ನಡದ ನೆಲ ಎಂದು ಡಿಸಿಎಂ ಗೋವಿಂದ್ ಕಾರಜೋಳ ಹೇಳಿದರು.
ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ನೇತೃತ್ವದಲ್ಲಿರುವುದು ಸಮ್ಮಿಶ್ರ ಸರ್ಕಾರ. ಕಾಂಗ್ರೆಸ್ ಪಕ್ಷದವರು ಯಾವಾಗ ಕಿತ್ತಾಕ್ತಾರೆ ಎಂಬ ಭಯ ಉದ್ಧವ್ ಠಾಕ್ರೆಗಿದೆ. ಹೀಗಾಗಿ ತನ್ನ ಕುರ್ಚಿ ಉಳಿಸಿಕೊಳ್ಳಲು ಜನರ ಗಮನ ಬೇರೆಡೆಗೆ ಸೆಳೆಯುತ್ತಿದ್ದಾರೆ. ಉದ್ಧವ್ ಠಾಕ್ರೆ ಇತಿಹಾಸ ಓದಿಲ್ಲ, ಛತ್ರಪತಿ ಶಿವಾಜಿ ಮಹಾರಾಜರ ಮೂಲವೇ ಕನ್ನಡವಾಗಿದ್ದು, ಶಿವಾಜಿ ಮಹಾರಾಜರ ಮೂಲಪುರುಷ ಬೆಳ್ಳಿಯಪ್ಪ ಅವರು ಗದಗ ಜಿಲ್ಲೆಯ ಸೊರಟೂರಿನವರು. ಕರ್ನಾಟಕದಲ್ಲಿ ಬರ ಬಿದ್ದ ಸಂದರ್ಭದಲ್ಲಿ ಮಹಾರಾಷ್ಟ್ರಕ್ಕೆ ಬೆಳ್ಳಿಯಪ್ಪ ಗುಳೆ ಹೋಗ್ತಾರೆ. ಹೀಗೆ ಗುಳೆ ಹೋದ ಬೆಳ್ಳಿಯಪ್ಪ ಮಹಾರಾಷ್ಟ್ರಕ್ಕೆ ಹೋಗಿ ನೆಲೆಸುತ್ತಾರೆ. ಅವರ ನಾಲ್ಕನೇ ತಲೆಮಾರಿಗೆ ಛತ್ರಪತಿ ಶಿವಾಜಿ ಮಹಾರಾಜರು ಬರ್ತಾರೆ. ಛತ್ರಪತಿ ಶಿವಾಜಿ ಮಹಾರಾಜರ ಮೂಲವೇ ಕನ್ನಡದ ನೆಲ. ಇದನ್ನು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅರ್ಥ ಮಾಡಿಕೊಳ್ಳಬೇಕು ಎಂದು ಖಡಕ್ ಸಂದೇಶ ರವಾನಿಸಿದರು.
ಕರ್ನಾಟಕದಲ್ಲಿ ಮರಾಠಿಗರು-ಕನ್ನಡಿಗರು ಅಣ್ತಮ್ಮಂದಿರಂತೆ ಇದ್ದೇವೆ. ಇಲ್ಲಿ ಭಾಷಾ ಸಮಸ್ಯೆ ಇಲ್ಲ. ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಕುರ್ಚಿಗಾಗಿ ಕುಲಗೆಡಿಸುವ ಕೆಲಸ ಮಾಡಬಾರದು ಎಂದು ತಿರುಗೇಟು ನೀಡಿದರು. ಮಹದಾಯಿ ವಿಚಾರದಲ್ಲಿ ಪಕ್ಷದ ಮಾತು ಕೇಳಲ್ಲ ಎಂಬ ಗೋವಾ ಸಿಎಂ ಪ್ರಮೋದ್ ಸಾವಂತ್ ಹೇಳಿಕೆ ವಿಚಾರಕ್ಕೆ, ಯಾರೂ ಯಾರ ಮಾತು ಕೇಳಬೇಕಾಗಿಲ್ಲ. ನಾವೂ ಯಾರ ಮಾತು ಕೇಳಬೇಕಾಗಿಲ್ಲ. ನೆಲ, ಜಲ ಪ್ರಶ್ನೆ ಬಂದಾಗ ನಾವು ನಮ್ಮ ನೆಲ ಜಲ ಪರವಾಗಿ ಇರ್ತೇವೆ. ನಮ್ಮ ಸರ್ಕಾರ ಅದನ್ನು ನಿಭಾಯಿಸುತ್ತದೆ ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದ್ರು.
ಇದನ್ನೂ ಓದಿ:ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿಎಂ