ಬೆಂಗಳೂರು : ಎಂಟು ವರ್ಷಗಳ ಹಿಂದೆ ನಗರದ ಜ್ಞಾನಭಾರತಿ ಆವರಣದಲ್ಲಿ ಕಾನೂನು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ 7 ಮಂದಿ ಆರೋಪಿಗಳಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಹೈಕೋರ್ಟ್ ಕಾಯಂಗೊಳಿಸಿ ಆದೇಶಿಸಿದೆ.
ವಿಚಾರಣಾ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಆರೋಪಿಗಳು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿರುವ ನ್ಯಾ. ಬಿ.ವೀರಪ್ಪ ಮತ್ತು ನ್ಯಾ.ಕೆ.ನಟರಾಜನ್ ಅವರನ್ನೊಳಗೊಂಡ ವಿಭಾಗೀಯ ಪೀಠ ಆ ಆದೇಶ ಮಾಡಿದೆ. ಅರ್ಜಿ ಸಂಬಂಧ ಸುದೀರ್ಘ ವಾದ-ಪ್ರತಿವಾದ ಆಲಿಸಿ ತೀರ್ಪು ಕಾಯ್ದಿರಿಸಿದ್ದ ಪೀಠ, ಇಂದು ಅಧೀನ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿದೆ. ಹಾಗೆಯೇ, ಇದರಲ್ಲಿ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ಹೇಳಿದೆ.
ರಾಮನಗರ ಜಿಲ್ಲೆಯ ಮೆಟರಿದೊಡ್ಡಿ ಗ್ರಾಮದ ರಾಮು, ಶಿವಣ್ಣ, ಮದ್ದೂರ, ಎಲೆಯಯ್ಯ, ಈರಯ್ಯ, ರಾಮ, ದೊಡ್ಡ ಈರಯ್ಯಗೆ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಅಪರಾಧಿಗಳು. ಪ್ರಕರಣದಲ್ಲಿ ಪ್ರಾಸಿಕ್ಯೂಶನ್ ಪರ ಎಸ್ಪಿಪಿ ವಿಜಯ್ ಕುಮಾರ್ ಮಜಗೆ ವಾದಿಸಿದ್ದರು.
ಪ್ರಕರಣದ ಹಿನ್ನೆಲೆ - 2012ರ ಅಕ್ಟೋಬರ್ 13ರ ಸಂಜೆ ನಗರದ ಹೊರವಲಯದ ಜ್ಞಾನಭಾರತಿ ಆವರಣದಲ್ಲಿ ಕಾನೂನು ವಿದ್ಯಾರ್ಥಿನಿ ಗೆಳೆಯನ ಕಾರಿನಲ್ಲಿ ಕೂತು ಮಾತನಾಡುತ್ತಿದ್ದಳು. ಈ ವೇಳೆ ಶ್ರೀಗಂಧದ ಮರ ಕಳವು ಮಾಡಲು ಬಂದಿದ್ದ ಆರೋಪಿಗಳು ಯುವಕನಿಗೆ ಥಳಿಸಿ, ವಿದ್ಯಾರ್ಥಿನಿಯನ್ನು ಎಳೆದೊಯ್ದು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಜ್ಞಾನ ಭಾರತಿ ಠಾಣೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದರು. ಹಾಗೆಯೇ, ಪ್ರಕರಣದ ಗಂಭೀರತೆ ಅರಿತ ವಿಚಾರಣಾ ನ್ಯಾಯಾಲಯ 2013ರ ಸೆ.4ರಂದು ಎಲ್ಲ ಅಪರಾಧಿಗಳಿಗೂ ಜೀವಾವಧಿ ಶಿಕ್ಷೆ ವಿಧಿಸಿತ್ತು.