ಬೆಂಗಳೂರು: ಸೆಂಚುರಿ ಸ್ಟಾರ್ ಡಾ ಶಿವರಾಜಕುಮಾರ್ ಅವರಿಗೆ 2015 ರಲ್ಲಿ ಉಂಟಾಗಿದ್ದ ಭುಜದ ಸಮಸ್ಯೆ ಈಗ ಮತ್ತೆ ಮರುಕಳಿಸಿದೆ. ಅದೇ ಸಮಸ್ಯೆಗೆ ಶಸ್ತ್ರ ಚಿಕಿತ್ಸೆ ಅಗತ್ಯ ಎಂದು ಲಂಡನ್ ವೈದ್ಯರು ತಿಳಿಸಿದ್ದಾರೆ. ಶಿವಣ್ಣ ಅವರು ಯಾವುದೇ ಕಾರಣಕ್ಕೂ ತಮ್ಮ ಸಿನಿಮಾಗಳ ಚಿತ್ರೀಕರಣಕ್ಕೆ ಧಕ್ಕೆ ಆಗಬಾರದೆಂದು ಒಂದು ತಿಂಗಳ ಬ್ರೇಕ್ ಘೋಷಿಸಿದ್ದಾರೆ. ಲಂಡನ್ನಲ್ಲಿ ಶಸ್ತ್ರ ಚಿಕಿತ್ಸೆ ಮುಗಿಸಿಕೊಂಡು ಬಂದ ಮೇಲೆ ಅವರ ಚಿತ್ರಗಳ ಚಟುವಟಿಕೆಗಳು ಮತ್ತೆ ಶುರುವಾಗಲಿವೆ.
ಶಸ್ತ್ರ ಚಿಕಿತ್ಸೆಗೆ ಒಂದು ತಿಂಗಳ ಕಾಲಾವಕಾಶ ಬೇಕಾಗಿರುವುದರಿಂದ ಶಿವಣ್ಣ ಅವರ ಜನುಮದಿನವನ್ನ ( ಜುಲೈ 12 ರಂದು ಶಿವಣ್ಣ 58ಕ್ಕೆ ತಲುಪಲಿದ್ದಾರೆ) ಈ ವರ್ಷ ವಿದೇಶದಲ್ಲಿ ಆಚರಣೆ ಮಾಡಿಕೊಳ್ಳಲಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ. ಜುಲೈ 6 ರಂದು ಶಿವಣ್ಣ ಜೊತೆ ಪತ್ನಿ ಗೀತಾ ಸಹ ಲಂಡನ್ಗೆ ಹೊರಡಲಿದ್ದಾರೆ. 20 ದಿನಗಳ ಕಾಲ ಲಂಡನ್ನಲ್ಲಿ ತಂಗಲಿರುವ ಶಿವಣ್ಣ ಆ ಬಳಿಕವೇ ಬೆಂಗಳೂರಿಗೆ ಮರಳಲಿದ್ದಾರೆ.
2015 ರಲ್ಲಿ ವ್ಯಾಯಾಮ ಮಾಡುತ್ತಿರುವಾಗ ಶಿವಣ್ಣ ಅವರ ಬಲ ಭುಜಕ್ಕೆ ಸಮಸ್ಯೆ ಎದುರಾಗಿತ್ತು. ಆಗ ನಗರದ ಮಲ್ಯ ಆಸ್ಪತೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಎರಡು ದಿನಗಳ ಬಳಿಕ ಶಿವಣ್ಣ ಮನೆಗೆ ವಾಪಸ್ ಆಗಿದ್ದರು. ಸದ್ಯ 4 ವರ್ಷಗಳ ಬಳಿಕ ಮತ್ತೆ ಭುಜದ ನೋವು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಶಸ್ತ್ರ ಚಿಕಿತ್ಸೆ ಅವಶ್ಯ ಎಂದು ಹೇಳಲಾಗಿದೆ.
ಡಾ. ಶಿವರಾಜಕುಮಾರ್ ಅವರ ಮೊದಲ ಪುತ್ರಿ ಡಾ ನಿರುಪಮಾ ಹಾಗೂ ಅವರ ಪತಿ ಡಾ ದಿಲೀಪ್ ಸಹ ವೈದ್ಯಕೀಯ ವೃತ್ತಿಯಲ್ಲಿರುವುದರಿಂದ ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.