ಬೆಂಗಳೂರು: ಕೊರೊನಾ ವೈರಸ್ ತಡೆಗಟ್ಟಲು ಎರಡನೇ ಹಂತದ ಲಾಕ್ಡೌನ್ಗೆ ಕರೆ ಕೊಟ್ಟ ಹಿನ್ನೆಲೆ ಇಂದಿನಿಂದ ಈ ಆದೇಶವನ್ನು ಮತ್ತಷ್ಟು ಬಿಗಿಗೊಳಿಸಲು ಪೊಲೀಸರು ಮುಂದಾಗಿದ್ದಾರೆ.
ನಗರದಲ್ಲಿ ಬೇಕಾಬಿಟ್ಟಿ ಓಡಾಡೋದು, ಮುಂಜಾನೆ ವಾಕಿಂಗ್ ನೆಪ ,ವಾಕಿಂಗ್ ಹೆಸರಲ್ಲಿ ನಾಯಿ ಹಿಡಿದು ಸುತ್ತಾಡಿ ಒಂದು ಏರಿಯಾದಿಂದ ಇನ್ನೊಂದು ಏರಿಯಾಗೆ ಹೋಗಿ ಬರೋದು ಹೀಗೆ ನಾನಾ ವಿಚಾರದಲ್ಲಿ ಸಾರ್ವಜನಿಕರನ್ನು ನಿಯಂತ್ರಣ ಮಾಡಲು ಪೊಲೀಸರು ಸರ್ವ ರೀತಿಯಲ್ಲೂ ಸಿದ್ಧರಾದ್ದಾರೆ.
ಇಂದಿನಿಂದ ಏಪ್ರಿಲ್ 20 ರವರೆಗೆ ಲಾಕ್ ಡೌನ್ ಬಿಗಿಗೊಳಿಸಲು ಕಮಿಷನರ್ ಭಾಸ್ಕರ್ ರಾವ್ ಸೂಚನೆ ನೀಡಿದ್ದಾರೆ. ಸಿಲಿಕಾನ್ ಸಿಟಿ ಸಂಪೂರ್ಣ ಖಾಕಿ ಕಣ್ಗಾವಲಿನಲ್ಲಿದೆ. ಈಗಾಗಲೇ ಪೊಲೀಸ್ ಇಲಾಖೆಯಿಂದ ಅಗತ್ಯ ಸೇವೆಗಳಿಗೆ 1.85 ಲಕ್ಷ ಪಾಸ್ ವಿತರಣೆಯಾಗಿದೆ. ಆದರೆ, ಪೊಲೀಸರ ಮಾಹಿತಿ ಪ್ರಕಾರ 3 ಲಕ್ಷ ವಾಹನ ಸವಾರರು ನಗರದಲ್ಲಿ ಪಾಸ್ ದುರ್ಬಳಕೆ ಮಾಡಿಕೊಂಡು ಅನಗತ್ಯವಾಗಿ ಓಡಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇಂತವರನ್ನ ಪತ್ತೆ ಮಾಡಿ ವಾಹನ ಜಪ್ತಿ ಮಾಡಿ, ಕೇಸ್ ದಾಖಲಿಸಲು ಮುಂದಾಗಿದ್ದಾರೆ.
ಮತ್ತೊಂದೆಡೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಕೂಡ ಟ್ವೀಟ್ ಮೂಲಕ ಎಚ್ಚರಿಕೆಯ ಸಂದೇಶ ತಿಳಿಸಿದ್ದಾರೆ. ಈಗಾಗಲೇ ಕೊಟ್ಟಿರುವ ಪಾಸ್ಗಳು ಏಪ್ರಿಲ್ 20 ರವರೆಗೂ ಮುಂದುವರೆಯುತ್ತೆ.ಆದರೆ, ಲಾಕ್ ಡೌನ್ ಹಾಗೂ ಸೀಲ್ ಡೌನ್ ಸಿಲಿಕಾನ್ ಸಿಟಿಯಲ್ಲಿ ತುಂಬಾ ಕಠಿಣವಾಗಿರಲಿದೆ. ಇಷ್ಟು ದಿನ ಸಹಕರಿಸಿದ್ದಕ್ಕೆ ಧನ್ಯವಾದ ಒಂದು ವೇಳೆ ನಿಯಮ ಉಲ್ಲಂಘನೆ ಮಾಡಿದ್ರೆ ಮುಂದಿನ ದಿನದಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಟ್ವೀಟ್ ಮೂಲಕ ಜನರಿಗೆ ಎಚ್ಚರಿಕೆ ನೀಡಿದ್ದಾರೆ.