ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಾತಿ ಪರಿಷ್ಕರಣೆ ಸಂಬಂಧ ರಚಿಸಿದ್ದ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ತನ್ನ ವರದಿಯನ್ನು ಸಲ್ಲಿಸಿದೆ. ವರದಿಯ ಶಿಫಾರಸು ಏನು ಎಂಬುದರ ಸಂಪೂರ್ಣ ವರದಿ ಇಲ್ಲಿದೆ.
ಆಯೋಗದ ಅಧ್ಯಕ್ಷ ನಾಗಮೋಹನ್ ದಾಸ್ ಅವರು, ರಾಜ್ಯದ ನಾಲ್ಕು ವಿಭಾಗ ಮಟ್ಟದ ಜಿಲ್ಲೆಗಳಾದ ಕಲಬುರಗಿ, ಬೆಳಗಾವಿ, ಮೈಸೂರು ಮತ್ತು ಬೆಂಗಳೂರು ಜಿಲ್ಲೆಯಲ್ಲಿ ಅಹವಾಲು ಸ್ವೀಕರಿಸಿದ್ದಾರೆ. ಆಯೋಗದ ಕಚೇರಿಯಲ್ಲಿ ಸಾರ್ವಜನಿಕರೊಂದಿಗೆ ಒಟ್ಟು 38 ಸಭೆಗಳನ್ನು ನಡೆಸಲಾಗಿದೆ. 851 ಲಿಖಿತ ದೂರುಗಳು ಆಯೋಗಕ್ಕೆ ಸಲ್ಲಿಕೆಯಾಗಿದ್ದವು. ಸರ್ಕಾರದ ವಿವಿಧ 47 ಇಲಾಖೆ, ಸಂಸ್ಥೆ, ನಿಗಮಗಳಿಗೆ ಪತ್ರ ಬರೆದು ಅಗತ್ಯ ಮಾಹಿತಿಗಳನ್ನು ಕ್ರೋಢೀಕರಿಸಿ ವರದಿಯನ್ನು ಸಿದ್ಧಪಡಿಸಲಾಗಿದೆ.
ಎಸ್ಸಿಗೆ ಶೇ.17ಕ್ಕೆ ಮತ್ತು ಎಸ್ಟಿಗೆ ಶೇ.7ಕ್ಕೆ ಮೀಸಲಾತಿ ಹೆಚ್ಚಳ ಮಾಡುವುದು ಮತ್ತು ಅತಿ ಹಿಂದುಳಿದ ಸಮುದಾಯಗಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಎಸ್ಸಿ & ಎಸ್ಟಿಗೆ ಜನಸಂಖ್ಯಾ ಆಧಾರವಾಗಿ ಮೀಸಲಾತಿ ಹೆಚ್ಚಿಸಬೇಕು. ಪ್ರಸ್ತುತ ಎಸ್ಸಿಗೆ ಶೇ.15ರಷ್ಟು ಮೀಸಲಾತಿ ಇದ್ದು, ಅದನ್ನು ಶೇ.17ಕ್ಕೆ ಮತ್ತು ಎಸ್ಟಿಗೆ ಶೇ.3ರಷ್ಟು ಇದೆ. ಅದನ್ನು ಶೇ.7ರಷ್ಟು ಹೆಚ್ಚಿಸಬೇಕು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಅತಿ ಹಿಂದುಳಿದ ಸಮುದಾಯಗಳಾದ ಅಲೆಮಾರಿ ಜನಾಂಗ, ಆದಿವಾಸಿ, ಪೌರಕಾರ್ಮಿಕ ಸೇರಿದಂತೆ ಇತರೆ ಸಮುದಾಯಗಳಿಗೆ ಸರಿಯಾದ ಶಿಕ್ಷಣ ಲಭಿಸುತ್ತಿಲ್ಲ. ಹೀಗಾಗಿ ಈ ಸಮುದಾಯಗಳ ಅಭಿವೃದ್ಧಿಗಾಗಿ ಶಿಕ್ಷಣಕ್ಕೆ ಆದ್ಯತೆ ನೀಡುವುದರ ಜತೆಗೆ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವಂತೆ ಶಿಫಾರಸು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಆಯೋಗ ದೇಶದ ವಿವಿಧ ರಾಜ್ಯಗಳಿಗೂ ಭೇಟಿ ನೀಡಿ ಅಲ್ಲಿನ ಮೀಸಲಾತಿ ಪ್ರಮಾಣವನ್ನು ಅಧ್ಯಯನ ನಡೆಸಿದೆ. ವರದಿಯಲ್ಲಿ ಆಯೋಗ ಶೇ.50ಕ್ಕಿಂತ ಮೀಸಲಾತಿ ಮೀರಬಾರದು ಎಂಬ ನಿಯಮ ಇದ್ದರೂ ಹಲವು ರಾಜ್ಯಗಳು ಇದನ್ನು ಮೀರಿವೆ. ವಿಶೇಷ ಸಂದರ್ಭದಲ್ಲಿ ವಿಶ್ವಾಸಾರ್ಹ ದಾಖಲೆಗಳನ್ನು ಪರಿಶೀಲಿಸಿ ಮೀಸಲಾತಿ ವಿಸ್ತರಣೆ ಮಾಡಬಹುದು ಎಂಬ ಅಂಶವು ಸಂವಿಧಾನದಲ್ಲಿದೆ ಎಂಬುದನ್ನೂ ಶಿಫಾರಸು ಮಾಡಿದೆ ಎಂದು ತಿಳಿದುಬಂದಿದೆ.
ಮೈತ್ರಿ ಸರ್ಕಾರದ ಸಿಎಂ ಆಗಿದ್ದ ಹೆಚ್.ಡಿ.ಕುಮಾರಸ್ವಾಮಿ ಅವಧಿಯಲ್ಲಿ ಮೀಸಲಾತಿ ಹೆಚ್ಚಳಕ್ಕೆ ಮನವಿ ಮಾಡಲಾಗಿತ್ತು. ವಾಲ್ಮೀಕಿ ಗುರುಪೀಠದ ಪ್ರಸನ್ನಾಂದ ಪುರಿ ಸ್ವಾಮೀಜಿ ನೇತೃತ್ವದಲ್ಲಿ ಮೀಸಲಾತಿ ಹೆಚ್ಚಳಕ್ಕೆ ಹೋರಾಟ ಮಾಡಲಾಗಿತ್ತು. ಹೀಗಾಗಿ ನಾಗಮೋಹನ್ ದಾಸ್ ನೇತೃತ್ವದಲ್ಲಿ ಏಕ ಸದಸ್ಯ ಆಯೋಗ ರಚನೆ ಮಾಡಲಾಗಿತ್ತು. ಉದ್ಯೋಗ ಮತ್ತು ಶಿಕ್ಷಣಕ್ಕಾಗಿ ಹೆಚ್ಚಿನ ಮೀಸಲಾತಿ ನೀಡಬೇಕು ಎಂಬುದು ಸಮುದಾಯದ ಬೇಡಿಕೆಯಾಗಿತ್ತು.