ರಾಮನಗರ: ನಾನು ನಿನ್ನೆ-ಮೊನ್ನೆಯಿಂದ ಚನ್ನಪಟ್ಟಣದಲ್ಲೇ ಇದ್ದೆ. ಮೈಸೂರಿಗೆ ಹೋಗಿದ್ದಾಗ ಸುತ್ತೂರು ಮಠಕ್ಕೆ ಹೋಗಿದ್ದೆ. ಈಗ ಇಲ್ಲಿ ಸ್ವಾಮೀಜಿ ಆಶೀರ್ವಾದ ಪಡೆಯಲು ಬಂದಿದ್ದೆ ಅಷ್ಟೇ. ನಾನು ಇನ್ನೂ 4-5 ಸ್ವಾಮೀಜಿಗಳನ್ನು ಭೇಟಿಯಾಗುತ್ತೇನೆ. ನಾನು ಈಗಲೇ ಬಹಿರಂಗವಾಗಿ ಏನನ್ನೂ ಹೇಳುವುದಿಲ್ಲ. ರಾಜಕೀಯವಾಗಿ ಮಾತನಾಡುವುದಿಲ್ಲ ಎಂದು ಸಚಿವ ಸಿ.ಪಿ.ಯೋಗೇಶ್ವರ್ ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ.
ರಾಮನಗರದ ಆಧಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಬಳಿಕ ಮಾತನಾಡಿದ ಅವರು, ನಾನು ಪಕ್ಷದ ಚೌಕಟ್ಟಿನಲ್ಲಿ ಇದ್ದೇನೆ. ಹೀಗಾಗಿ ಸದ್ಯಕ್ಕೆ ಏನನ್ನೂ ಮಾತನಾಡುವುದಕ್ಕೆ ಹೋಗುವುದಿಲ್ಲ. ಯಾರು ಬೇಕಿದ್ದರೂ ದೆಹಲಿಗೆ ಹೋಗಬಹುದು. ಏನು ಬೇಕಿದ್ದರೂ ಮಾತನಾಡಲಿ ಎಂದು ದೆಹಲಿ ಭೇಟಿ ನೀಡಿದ್ದ ವಿಜಯೇಂದ್ರ ಬಗ್ಗೆ ಮಾತನಾಡಿದರು.
ಇನ್ನು ಸಹಿ ಸಂಗ್ರಹದ ಬಗ್ಗೆ ನನಗೇನು ಗೊತ್ತಿಲ್ಲ. ನಮ್ಮದು ರಾಷ್ಟ್ರೀಯ ಪಕ್ಷ. ಹೈಕಮಾಂಡ್ ಇದೆ. ನನ್ನ ಕೆಲ ಸ್ನೇಹಿತರು ನನ್ನ ಮನಸ್ಸಿಗೆ ನೋವಾಗುವಂತೆ ಮಾತನಾಡಿದ್ದಾರೆ. ಅವರ ಹಿಂದೆ ಯಾರು ಮಾತನಾಡಿಸುತ್ತಿದ್ದಾರೋ ಗೊತ್ತಿಲ್ಲ. ನನ್ನ ಒಂದೇ ಒಂದು ಹೇಳಿಕೆ ಇಷ್ಟೊಂದು ದೊಡ್ಡದಾಗುತ್ತದೆ ಎಂದು ಗೊತ್ತಿರಲಿಲ್ಲ. ಇದರಿಂದ ನೋವಾಗಿದೆ. ಮಾತನಾಡಲು ಬಹಳ ವಿಷಯ ಇದೆ. ಯಾರು ಯಾವಾಗ ಬೆಂಬಲ ನೀಡುತ್ತಾರೆ ಎಂದು ಈಗ ಹೇಳುವುದಿಲ್ಲ ಎಂದರು.
ಬಲಾಬಲ ಕಣ ಇದಲ್ಲ. ಯಾರೋ ನಾಲ್ಕು ಜನ ಸ್ನೇಹಿತರು ಮಾತನಾಡುತ್ತಾರೆ. ಮಾತನಾಡಲಿ ಬಿಡಿ. ಸಿದ್ದು, ಕೃಷ್ಣಭೈರೆಗೌಡ, ಡಿಕೆ ಬ್ರದರ್ಸ್ ಈ ಬಗ್ಗೆ ಮಾತನಾಡುತ್ತಿದ್ದಾರೆ. ವಿರೋಧ ಪಕ್ಷದಲ್ಲಿನ ಅವರು, ನಮ್ಮ ಪಕ್ಷದ ಬಗೆಗಿನ ನನ್ನ ಹೇಳಿಕೆ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.
ಇನ್ನು ಮೆಗಾಸಿಟಿ ತನಿಖೆ ಆಗಲಿ. ಹಿಂದೆ ಎಚ್ಡಿಕೆ, ಡಿಕೆ ಬ್ರದರ್ಸ್ ಸಹ ತನಿಖೆ ಮಾಡಿಸಿದ್ದರು. ನ್ಯಾಯಾಲಯವು ಕ್ಲೀಯರ್ ಮಾಡಿದೆ. ಸಾರ್ವಜನಿಕ ಬದುಕಿನಲ್ಲಿದ್ದೇನೆ. ಇನ್ನು ಬೇಕಾದ್ರು ತನಿಖೆ ಆಗಲಿ. ನನ್ನ ತಪ್ಪಿದ್ದರೆ ಶಿಕ್ಷೆ ಅನುಭವಿಸುತ್ತೇನೆ ಬಿಡಿ ಎಂದರು.