ಬೆಂಗಳೂರು : ಪೊಲೀಸ್ ಠಾಣೆಯಲ್ಲಿ ಹರಾಜು ಹಾಕುವ ವಾಹನಗಳನ್ನು ಮಾರಾಟ ಮಾಡಿಕೊಡುವುದಾಗಿ ನಂಬಿಸಿ ಸಾರ್ವಜನಿಕರಿಂದ ಹಣ ಪಡೆದು ವಂಚಿಸುತ್ತಿದ್ದ ನಕಲಿ ಸಿಸಿಬಿ ಅಧಿಕಾರಿಯನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ. ದೇವನಹಳ್ಳಿಯ ಬೂದಿಗೆರೆಯ ಲೂರ್ದ್ ನಾಥನ್ ಬಂಧಿತ ಆರೋಪಿ.
ಖಾಸಗಿ ಕಂಪನಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ ಲೂರ್ದ್, ಅಕ್ರಮವಾಗಿ ಹಣ ಸಂಪಾದನೆ ಮಾಡಲು ಅಡ್ಡದಾರಿ ತುಳಿದಿದ್ದ. ಈ ನಿಟ್ಟಿನಲ್ಲಿ ಸಿಸಿಬಿ ಪೊಲೀಸ್ ಎಂದು ಎಲ್ಲರ ಬಳಿ ಹೇಳಿಕೊಂಡು ತಿರುಗಾಡುತ್ತಿದ್ದ.
ಬೈಕ್ ಅಗತ್ಯವಿರುವವರನ್ನು ಗುರಿಯಾಗಿಸಿಕೊಂಡು ಪೊಲೀಸ್ ಡಿಪಾರ್ಟ್‌ಮೆಂಟ್‌ನಲ್ಲಿ ಹರಾಜು ಹಾಕುವ ಪೊಲೀಸ್ ಠಾಣೆಗೆ ಕರೆದೊಯ್ದು ವಾಹನ ಮಾರಾಟ ಮಾಡಿಸಿಕೊಡುವುದಾಗಿ ನಂಬಿಸಿ ಅವರಿಂದ ಹಣ ಪಡೆಯುತ್ತಿದ್ದ.
ಇದೇ ರೀತಿ ಸಂಪಿಗೆಹಳ್ಳಿಯ ವ್ಯಕ್ತಿಯೋರ್ವರಿಂದ 17 ಸಾವಿರ ರೂಪಾಯಿ ಪಡೆದು ವಂಚಿಸಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಸಂಪಿಗೆಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಬೆಳ್ಳಂದೂರು ಠಾಣಾ ವ್ಯಾಪ್ತಿಯಲ್ಲಿ ಸಿಸಿಬಿ ಅಧಿಕಾರಿ ಸೋಗಿನಲ್ಲಿ ವಂಚಿರುವುದು ಗೊತ್ತಾಗಿದೆ ಎಂದು ನಗರ ಈಶಾನ್ಯ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿ ತಿಳಿಸಿದ್ದಾರೆ.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ