ಬೆಂಗಳೂರು: ಚಿತ್ರರಂಗದ ಒತ್ತಡಕ್ಕೆ ಮಣಿದ ಸರ್ಕಾರ ಫೆ. 5ರಿಂದ ಶೇ 100ರಷ್ಟು ಚಿತ್ರ ಮಂದಿರ ಭರ್ತಿ ಮಾಡಲು ಅವಕಾಶ ನೀಡಿದೆ. ಆದ್ರೆ ಸರ್ಕಾರದ ಈ ಹೊಸ ಮಾರ್ಗಸೂಚಿಯಲ್ಲಿ ರಂಗಮಂದಿಗಳಿಗೆ ಯಾವುದೇ ಸೂಚನೆ ಹೊರಡಿಸಿಲ್ಲ. ಇಂದಿಗೂ ರಂಗತಂಡಗಳು, ನಾಟಕದ ರಂಗಮಂದಿರಗಳಲ್ಲಿ ಕೇವಲ ಶೇ 50ರಷ್ಟು ಸೀಟು ಮಾತ್ರ ಒದಗಿಸಬೇಕಾಗಿದೆ. ಸರ್ಕಾರದ ಈ ನೀತಿ ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಎಂಬಂತಾಗಿದ್ದು, ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿರುವ ರಂಗಕರ್ಮಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ರಂಗಭೂಮಿಯು ಲಾಭರಹಿತವಾಗಿ, ಕಲೆಯ ಉದ್ದೇಶದಿಂದ ನೂರಾರು ತಂಡಗಳು ನಗರದಲ್ಲಿ ಕನ್ನಡ ನಾಟಕಗಳನ್ನು ಪ್ರದರ್ಶಿಸುತ್ತಿವೆ. ಹತ್ತಾರು ರಂಗಮಂದಿರಗಳು ಕೋವಿಡ್ ಸಮಯದಲ್ಲಿ ಸಂಪೂರ್ಣವಾಗಿ ಮುಚ್ಚಿದ್ದವು. ನಂತರ ಸರ್ಕಾರದ ಮಾರ್ಗಸೂಚಿಯಂತೆ ಶೇ. 50 ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡುತ್ತಿದೆ. ಸಿನಿಮಾ ಥಿಯೇಟರ್ನಂತೆಯೇ ರಂಗಮಂದಿರಗಳಿಗೂ ಶೇ.100 ರಷ್ಟು ಪ್ರೇಕ್ಷಕರನ್ನು ಒಳಬಿಡಬೇಕಾಗಿತ್ತು. ರಂಗತಂಡಗಳಿಗೆ ಮಾತ್ರ ಯಾಕೆ ಈ ಶಿಕ್ಷೆ ಎಂದು ರಂಗಾಸಕ್ತರು ಒತ್ತಾಯಿಸಿದ್ದಾರೆ.
ಈ ಬಗ್ಗೆ ನಾಟಕ ಅಕಾಡೆಮಿಯ ಆರ್. ಭೀಮಸೇನ್ ಪ್ರತಿಕ್ರಿಯಿಸಿದ್ದು, ರಂಗಮಂದಿರಗಳೂ ತೆರೆಯಬಹುದು. ಸರ್ಕಾರದ ರವೀಂದ್ರ ಕಲಾಕ್ಷೇತ್ರ ಈಗಾಗಲೇ ಫೆಬ್ರವರಿ 2ರಿಂದಲೇ ಎಲ್ಲ ಸೀಟು ಭರ್ತಿ ಮಾಡಲು ಅವಕಾಶ ಕೊಟ್ಟಿದೆ. ಖಾಸಗಿ ರಂಗಮಂದಿರಗಳ ಬಗ್ಗೆ ಗೊತ್ತಿಲ್ಲ ಎಂದು ತಿಳಿಸಿದರು.
ಖ್ಯಾತ ರಂಗಮಂದಿರ ರಂಗಶಂಕರದ ಆಡಳಿತ ವರ್ಗದ ಸಿಬ್ಬಂದಿ ಪ್ರತಿಕ್ರಿಯಿಸಿ, ಸರ್ಕಾರದ ಮಾರ್ಗಸೂಚಿ ಅಡ್ಡಗೋಡೆ ಮೇಲೆ ದೀಪ ಇಟ್ಟಂತಾಗಿದೆ. ಸದ್ಯ ಸರ್ಕಾರದ ಆದೇಶ ಕೇವಲ ಸಿನಿಮಾ ಥಿಯೇಟರ್ಗಳಿಗೆ ಸಂಬಂಧಿಸಿದ್ದು, ರಂಗಮಂದಿರ ಬಂದ್ ಮಾಡಿ ಅಥವಾ ಶೇಕಡಾ 50ರಷ್ಟು ಮಾತ್ರ ಆಸನ ವ್ಯವಸ್ಥೆ ಕೊಡಿ ಎಂಬ ನಿಯಮ ಮಾಡಿದ್ದ ಸರ್ಕಾರ ಈಗ ಶೇ.100 ರಷ್ಟು ಅವಕಾಶ ಕೊಡಲು ಆದೇಶ ಹೊರಡಿಸಬೇಕಿತ್ತು. ಇಲ್ಲವಾದಲ್ಲಿ ಲಕ್ಷಾಂತರ ರೂ. ಫೈನ್ ಕಟ್ಟಲು ನಮ್ಮಿಂದ ಸಾಧ್ಯವಿಲ್ಲ. ಈಗಾಗಲೇ ಲಾಕ್ ಡೌನ್ ಸಮಯದ ವಿದ್ಯುತ್ ಬಿಲ್ ಕಡಿತದ ಮನವಿಗೂ ಸ್ಪಂದನೆ ಸಿಕ್ಕಿಲ್ಲ. ಪ್ರದರ್ಶನಕ್ಕೂ ಮುನ್ನ ಎಲ್ಲ ಪ್ರೇಕ್ಷಕರ ಹೆಸರು, ನಂಬರ್ ತೆಗೆದುಕೊಳ್ಳಲು ಬಹಳ ಸಮಯ ಹಿಡಿಯುತ್ತದೆ. ಸರ್ಕಾರದ ನಿಯಮಗಳೇ ಅರ್ಥವಾಗುತ್ತಿಲ್ಲ ಎಂದರು.
ಈ ಸುದ್ದಿಯನ್ನೂ ಓದಿ: ಪ್ರಚೋದನಕಾರಿ ಭಾಷಣ ಆರೋಪ: ಹಿಂದೂ ಮುಖಂಡರ ವಿರುದ್ಧ ಪ್ರಕರಣ ದಾಖಲು
ಇನ್ನು ಸಮಷ್ಟಿ ತಂಡದ ಮ್ಯಾನೇಜರ್ ಗಂಗಾಧರ್ ಕರೀಕೆರೆ ಮಾತನಾಡಿ, ಸರ್ಕಾರದ ಇಬ್ಭಗೆ ನೀತಿ ಅರ್ಥವಾಗುತ್ತಿಲ್ಲ. ಸಿನಿಮಾದವರು, ಸ್ಟಾರ್ ವ್ಯಾಲ್ಯೂ ಇರುವವರು ಮಾತನಾಡಿದ ಕೂಡಲೇ ಸಿನಿಮಾ ಮಂದಿರಗಳನ್ನು ಪೂರ್ಣ ಪ್ರಮಾಣದಲ್ಲಿ ತೆರೆಯುತ್ತಾರೆ. ಕನ್ನಡ ರಂಗಭೂಮಿ ಮೊದಲೇ ಬಡವಾಗಿದೆ. ಅದರ ಮಧ್ಯೆ ನೂರೆಂಟು ವಿಘ್ನಗಳು ಯಾಕೆ? ರಂಗಮಂದಿರ ಮುಚ್ಚಲು ಕೊಟ್ಟ ಪ್ರಾಶಸ್ತ್ಯ ತೆರೆಯಲು ಯಾಕೆ ಕೊಡೋದಿಲ್ಲ. ಕನ್ನಡ ಸಂಸ್ಕೃತಿ ಇಲಾಖೆ ಅಥವಾ ನಾಟಕ ಅಕಾಡೆಮಿಯೂ ಈ ಬಗ್ಗೆ ಯಾವುದೇ ಪ್ರಕಟಣೆ ಹೊರಡಿಸಿಲ್ಲ. ಕನ್ನಡ ರಂಗಭೂಮಿಗೆ ಪ್ರೇಕ್ಷಕರು ಬರುವುದೇ ಕಷ್ಟದಲ್ಲಿ, ಅಂತಹದಲ್ಲಿ ಬಂದವರನ್ನೂ ಕೂಡ ವಾಪಸ್ ಕಳಿಸುವುದು ಎಷ್ಟು ಸರಿ. ಇಡೀ ಬೆಂಗಳೂರು ಗಿಜಿಗುಡುತ್ತಿದೆ. ರಂಗಮಂದಿರಕ್ಕೆ ಮಾತ್ರ ಈ ಕಟ್ಟುನಿಟ್ಟು ಯಾಕೆ? ಈ ಬಗ್ಗೆ ಯಾಕೆ ಸಂಬಂಧಪಟ್ಟವರು ಮಾತನಾಡುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.