ಬೆಂಗಳೂರು: ಕರ್ನಾಟಕ ವೈದ್ಯಕೀಯ ಮಂಡಳಿ (ಕೆಎಂಸಿ)ಗೆ ನಡೆಸಿದ್ದ ಚುನಾವಣೆಯನ್ನು ರದ್ದುಗೊಳಿಸಿ ಆದೇಶ ನೀಡಿದ್ದ ಹೈಕೋರ್ಟ್ ಏಕಸದಸ್ಯ ಪೀಠದ ತೀರ್ಪಿಗೆ ವಿಭಾಗೀಯ ಪೀಠವು ಮಧ್ಯಂತರ ತಡೆಯಾಜ್ಞೆ ನೀಡಿದೆ.
ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಡಾ. ಮಧುಸೂಧನ್ ಕಿರಿಗನೂರ್ ಮತ್ತಿತರರು ಸಲ್ಲಿಸಿರುವ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ ಎಸ್ ಮುದಗಲ್ ನೇತೃತ್ವದ ವಿಭಾಗೀಯ ಪೀಠ ಈ ಮಧ್ಯಂತರ ತಡೆಯಾಜ್ಞೆ ಆದೇಶ ನೀಡಿದೆ. ಇದೇ ವೇಳೆ ಪ್ರಕರಣವನ್ನು ವಿವರವಾಗಿ ಪರಿಶೀಲಿಸಬೇಕಿದೆ ಎಂದು ಅಭಿಪ್ರಾಯಪಟ್ಟಿರುವ ಪೀಠ, ಕೆಎಂಸಿ ರಿಜಿಸ್ಟ್ರಾರ್‌ಗೆ ನೋಟಿಸ್ ಜಾರಿಗೊಳಿಸಲು ಸೂಚಿಸಿದೆ. ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 22ಕ್ಕೆ ಮುಂದೂಡಲಾಗಿದೆ.
ಪ್ರಕರಣದ ಹಿನ್ನೆಲೆ:
2020ರ ಜನವರಿ 23ರಂದು ಕರ್ನಾಟಕ ವೈದ್ಯಕೀಯ ಮಂಡಳಿಗೆ ಚುನಾವಣೆ ನಡೆಸಲಾಗಿತ್ತು. ಆ ಪ್ರಕಾರ ಜನವರಿ 25ರಂದು ಚುನಾವಣಾ ಫಲಿತಾಂಶ ಪ್ರಕಟಿಸಲಾಗಿತ್ತು. ಆದರೆ, ಚುನಾವಣೆಗೂ ಮುನ್ನ ಮತದಾರರ ಪಟ್ಟಿಗೆ ಸಲ್ಲಿಸಲಾಗಿದ್ದ ಆಕ್ಷೇಪಣೆಗಳನ್ನು ಪರಿಗಣಿಸಿಲ್ಲ ಎಂದಿದ್ದ ಅರ್ಜಿದಾರರು, ಮೃತ ವೈದ್ಯರು ಹಾಗೂ ಲೈಸೆನ್ಸ್ ಹಿಂದಿರುಗಿಸಿ ವಿದೇಶಕ್ಕೆ ತೆರಳಿರುವ ವೈದ್ಯರ ಹೆಸರನ್ನೂ ಚುನಾವಣಾ ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆ. ಹೀಗಾಗಿ, ಚುನಾವಣೆ ನಿಯಮಾನುಸಾರ ನಡೆದಿಲ್ಲ ಎಂದು ಆರೋಪಿಸಿದ್ದರು.
ಅರ್ಜಿದಾರರ ಮನವಿ ಪರಿಗಣಿಸಿದ್ದ ಏಕಸದಸ್ಯ ಪೀಠ, ಜನವರಿ 25ರಂದು ಪ್ರಕಟಿಸಿದ್ದ ಚುನಾವಣಾ ಫಲಿತಾಂಶವನ್ನು ರದ್ದುಗೊಳಿಸಿತ್ತು. ಹಾಗೆಯೇ ಚುನಾವಣಾಧಿಕಾರಿಯ ನಡೆಯು ಕಾನೂನುಬಾಹಿರವಾಗಿದ್ದು, ವಂಚನೆಯಿಂದ ಕೂಡಿದೆ. ಹೀಗಾಗಿ, ಮುಂದಿನ ಆರು ತಿಂಗಳಲ್ಲಿ ಕೆಎಂಸಿಗೆ ಹೊಸದಾಗಿ ಚುನಾವಣೆ ನಡೆಸುವಂತೆ ನಿರ್ದೇಶಿಸಿತ್ತು.
ಈ ಆದೇಶ ಪ್ರಶ್ನಿಸಿರುವ ಮೇಲ್ಮನವಿದಾರರು, ಚುನಾವಣಾಧಿಕಾರಿ ನಡೆಯು ವಂಚನೆಯಿಂದ ಕೂಡಿದೆ ಎಂಬುದನ್ನು ಸಾಬೀತುಪಡಿಸಿಲ್ಲ. ಹೀಗಾಗಿ ಏಕಸದಸ್ಯ ಪೀಠದ ಆದೇಶ ರದ್ದುಪಡಿಸಬೇಕು ಎಂದು ಕೋರಿದ್ದಾರೆ.