ಬೆಂಗಳೂರು: ರಾಜ್ಯದ 22 ಜಿಲ್ಲೆಗಳಲ್ಲಿ ಪ್ರವಾಹ ಹಾಗೂ ಭಾರೀ ಮಳೆಯಿಂದ ಉಂಟಾಗಿರುವ ನಷ್ಟದ ಕುರಿತು ಅಧ್ಯಯನ ನಡೆಸಲು ಕೇಂದ್ರ ತಜ್ಞರ ತಂಡ ಇಂದು ರಾಜ್ಯಕ್ಕೆ ಆಗಮಿಸಲಿದೆ.
ಪ್ರವಾಹ ಪೀಡಿತ ಪ್ರದೇಶಗಳು ಮತ್ತು ಮಳೆ ಹಾನಿ ಸ್ಥಳಗಳಲ್ಲಿ ಮೂರು ದಿನ ಕೇಂದ್ರದ ಅಧಿಕಾರಿಗಳ ತಂಡ ಅಧ್ಯಯನ ನಡೆಸಿ, ರಾಜ್ಯದಲ್ಲಾದ ನಷ್ಟದ ಬಗ್ಗೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ರಾಜ್ಯದಲ್ಲಿ ಪ್ರವಾಹ ಮತ್ತು ಅಪಾರ ಪ್ರಮಾಣದ ಮಳೆಯಿಂದ ಸುಮಾರು 40 ಸಾವಿರ ಕೋಟಿ ರೂಪಾಯಿ ಹಾನಿಯಾಗಿದೆ. ಅತಿವೃಷ್ಟಿ ನಷ್ಟ ನಿಭಾಯಿಸಲು ರಾಜ್ಯಕ್ಕೆ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದರು.
ರಾಜ್ಯದ ಮನವಿ ಆಧರಿಸಿ ಅತಿವೃಷ್ಟಿ ನಷ್ಟದ ಬಗ್ಗೆ ಅಧ್ಯಯನ ನಡೆಸಲು ಕೇಂದ್ರ ಸರ್ಕಾರ ಒಂದು ತಂಡವನ್ನು ಕಳಿಸುತ್ತಿದೆ. ಇಂದು ರಾಜ್ಯಕ್ಕೆ ಭೇಟಿ ನೀಡುವ ತಂಡಕ್ಕೆ ಪ್ರವಾಹ ಹಾಗೂ ಮಳೆ ಹಾನಿಯ ಬಗ್ಗೆ ವಿವರ ನೀಡಲು ರಾಜ್ಯದ ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ಬೆಳಗಾವಿ, ಹಾವೇರಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಶಿವಮೊಗ್ಗ, ಗದಗ, ಕೊಡಗು ಜಿಲ್ಲೆ ಸೇರಿದಂತೆ ಹೆಚ್ಚು ಹಾನಿಗೊಳಗಾದ ಪ್ರದೇಶಗಳಿಗೆ ಕೇಂದ್ರ ತಂಡ ಭೇಟಿ ನೀಡಲಿದೆ. ಬಳಿಕ ಮುಖ್ಯ ಕಾರ್ಯದರ್ಶಿಗಳ ಜತೆ ಸಭೆ ನಡೆಸಿ ವಾಪಸಾಗಲಿದೆ.