ನವದೆಹಲಿ: ದೇಶದೆಲ್ಲೇ ಚೀನಾ ವಸ್ತುಗಳನ್ನು ಬಹಿಷ್ಕರಿಸಿ ಎಂದು ಕರೆಕೊಡುತ್ತಿದ್ದರೆ ಇತ್ತ ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ ತನ್ನ 13ನೇ ಆವೃತ್ತಿಯಲ್ಲಿ ಚೀನಾ ಮೊಬೈಲ್ ಕಂಪನಿಯ ಪ್ರಾಯೋಜಕತ್ವ ಮುಂದುವರಿಸುವ ಮೂಲಕ ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾಗಿದೆ.
ಸೆಪ್ಟೆಂಬರ್ 19ರಿಂದ ನವೆಂಬರ್ 10ರೊಳಗೆ ಐಪಿಎಲ್ ಅನ್ನು ಯುಎಇನಲ್ಲಿ ಆಯೋಜನೆ ಮಾಡಲಾಗುವುದು ಎಂದು ಭಾನುವಾರ ನಡೆದ ಐಪಿಎಲ್ ಆಡಳಿತ ಮಂಡಳಿಯ ಸಭೆಯಲ್ಲಿ ಖಚಿತ ಪಡಿಸಲಾಗಿದೆ. ಇನ್ನು ಈ ಆವೃತ್ತಿಯಲ್ಲಿ ಎಲ್ಲ ಪ್ರಾಯೋಜಕತ್ವ ಮುಂದುವರಿಯಲಿದೆ ಎಂದು ಕೂಡ ತಿಳಿದು ಬಂದಿದೆ.
ಐಪಿಎಲ್ ಟೈಟಲ್ ಪ್ರಾಯೋಜಕತ್ವವನ್ನು ಚೀನಾ ಮೂಲಕದ ವಿವೋ ಮೊಬೈಲ್ ಕಂಪನಿ ಪಡೆದಿದೆ. ಬಿಸಿಸಿಐ ವಿವೋ ಕಂಪನಿಯೊಂದಿಗೆ 5 ವರ್ಷದ ಒಪ್ಪಂದ ಮಾಡಿಕೊಂಡಿದ್ದು, ಪ್ರತಿ ವರ್ಷ ಬಿಸಿಸಿಐ ಸುಮಾರು 440 ಕೋಟಿ ರೂ.ಗಳನ್ನು ವಿವೋ ಕಂಪನಿಯಿಂದ ಪಡೆಯುತ್ತಿದೆ.
ನಿನ್ನ ನಡೆದ ಸಭೆಯಲ್ಲಿ, " ಈ ಬಾರಿಯೂ ಎಲ್ಲ ಪ್ರಾಯೋಜಕರು ನಮ್ಮೊಂದಿಗಿದ್ದಾರೆ . ಈ ಮಾತಿನ ಒಳ ಅರ್ಥವನ್ನು ನೀವೇ ತಿಳಿದುಕೊಳ್ಳಬೇಕು "ಎಂದು ಮಂಡಳಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.
ಈ ವಿಚಾರ ಬಹಿರಂಗವಾಗುತ್ತಿದ್ದಂತೆ ಭಾರತೀಯ ಅಭಿಮಾನಿಗಳು ಕೂಡ ಆಕ್ರೋಶ ವ್ಯಕ್ತಪಡಿಸಿ ಐಪಿಎಲ್ ಬಹಿಷ್ಕರಿಸಿ ಎಂದು ಸಾಮಾಜಿಕ ಜಾಲಾತಾಣದಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ. ದೇಶದಲ್ಲಿ ಚೀನಾ ಉತ್ಪನ್ನಗಳ ಬಹಿಷ್ಕಾರ ಅಭಿಯಾನವಾಗುತ್ತಿರುವಾಗ ಐಪಿಎಲ್ ಮಾತ್ರ ಚೀನಾ ಕಂಪನಿಯ ಪ್ರಾಯೋಜಕತ್ವ ಮುಂದುವರಿಸುತ್ತಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.