ಅಬುಧಾಬಿ: ಭಾರತ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನನಗೆ ಆರಂಭದ ದಿನಗಳಿಂದಲೂ ಪ್ರಿಯವಾದ ಆಟಗಾರ, ಬಾಲ್ಯದಿಂದಲೇ ಅವರ ಆಟವನ್ನೇ ನೋಡುತ್ತಾ ಬೆಳೆದಿದ್ದೇನೆ ಎಂದು ಕೆಕೆಆರ್ ಮಧ್ಯಮ ಕ್ರಮಾಂಕದ ಆಟಗಾರ ನಿತೀಶ್ ರಾಣಾ ಹೇಳಿಕೊಂಡಿದ್ದಾರೆ.
ಕೆಕೆಆರ್ ಅಧಿಕೃತ ವೆಬ್ಸೈಟ್ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಆಟದ ಶೈಲಿ ಹೇಗೆ ಸೌರವ್ ಗಂಗೂಲಿಗೆ ಹೋಲುತ್ತದೆ, ತಾವು ಬಾಲ್ಯದಿಂದ ಗಂಗೂಲಿಯವರನ್ನು ಹೇಗೆ ಅನುಸರಿಸುತ್ತಿರುವೆ ಅನ್ನೋದನ್ನು ವಿವರಿಸಿದ್ದಾರೆ.
ನಾನು ಕ್ರಿಕೆಟ್ ಆಡುವುದಕ್ಕಿಂತಲೂ ಮೊದಲೇ ನಮ್ಮ ಕುಟಂಬದವರಿಗೆ ಕ್ರಿಕೆಟ್ ಎಂದರೆ ಬಹಳ ಹುಚ್ಚಿತ್ತು. ನನ್ನ ತಂದೆ ಸಚಿನ್ ತೆಂಡೂಲ್ಕರ್ ಅವರ ಬಹುದೊಡ್ಡ ಅಭಿಮಾನಿ, ನನ್ನ ಅಣ್ಣ ರಾಹುಲ್ ದ್ರಾವಿಡ್ ಅಭಿಮಾನಿ ಮತ್ತು ನನಗೆ ಸೌರವ್ ಗಂಗೂಲಿಯೆಂದರೆ ಅಚ್ಚುಮೆಚ್ಚು. ದಾದಾ ಏನಾದರೂ ಬೇಗ ಔಟಾದರೆ, ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡು ಅಳುತ್ತಿದ್ದೆ. ಆಗ ನಾನು ಕ್ರಿಕೆಟ್ ಕೂಡ ಆಡುತ್ತಿರಲಿಲ್ಲ.
ಇದು ಮನೆಯಲ್ಲಿನ ದಿನಚರಿಯಾಗಿತ್ತು. ಸಚಿನ್, ದ್ರಾವಿಡ್ ಹಾಗೂ ಗಂಗೂಲಿ ಯಾವ ರೀತಿ ಪ್ರದರ್ಶನ ತೋರಿತ್ತಾರೆ ಎನ್ನುವುದರ ಆಧಾರದ ಮೇಲೆ ನಾವು ಪರಸ್ಪರ ಕೀಟಲೆ ಮಾಡುತ್ತಿದ್ದೆವು ಎಂದು ಬಾಲ್ಯದಲ್ಲಿಯೇ ದಾದಾ ಮತ್ತು ಕ್ರಿಕೆಟ್ ಮೇಲೆ ತಮಗಿದ್ದ ಪ್ರೇಮವನ್ನು ರಾಣಾ ತಿಳಿಸಿದ್ದಾರೆ.
ನಾನು ಪ್ರತಿ ಬೌಲರ್ ಮತ್ತು ಬ್ಯಾಟ್ಸ್‌ಮನ್‌ನ ಶೈಲಿಯನ್ನು ಉತ್ತಮವಾಗಿ ಅನುಕರಣೆ ಮಾಡುತ್ತಿದ್ದೆ. ಆದ್ದರಿಂದ, ಎಲ್ಲರೂ ನನ್ನನ್ನು ದಾದಾರನ್ನು ಅನುಕರಣೆ ಮಾಡಲು ಹೇಳುತ್ತಿದ್ದರು. ನಾನು ಅದನ್ನು ಸಂತೋಷದಿಂದ ಮಾಡುತ್ತಿದ್ದೆ. ದಾದಾರ ಪುನರಾವರ್ತಿತ ಅನುಕರಣೆಯೇ ನನ್ನ ಅಭ್ಯಾಸಕ್ಕೆ ಕಾರಣವಾಯಿತು ಮತ್ತು ನನ್ನ ಬ್ಯಾಟಿಂಗ್ ಶೈಲಿಯನ್ನು ಒಂದು ನಿರ್ದಿಷ್ಟ ಮಟ್ಟಿಗೆ ರೂಪಿಸಿತು " ಎಂದು ಅವರು ಹೇಳಿದ್ದಾರೆ.
ಗಂಗೂಲಿ ಹೊರತುಪಡಿಸಿದರೆ, ಮಾಜಿ ಎಡಗೈ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ರನ್ನು ಕೂಡ ಸುಮಾರು 12 ವರ್ಷಗಳ ಕಾಲ ಗಮನಿಸಿದ್ದೇನೆ. ಇವರೂ ಕೂಡ ನನಗೆ ಪ್ರೇರಣೆಯಾಗಿದ್ದಾರೆಂದು ಅವರು ತಿಳಿಸಿದ್ದಾರೆ. ಉತ್ತಮ ಆರಂಭಪಡೆದರೂ ದೊಡ್ಡ ಮೊತ್ತ ಗಳಿಸಲು ವಿಫಲರಾಗುತ್ತಿರುವುದರ ಬಗ್ಗೆ ತಾವು ಕೋಚ್ಗಳಾದ ಅಭಿಷೇಕ್ ನಾಯರ್ ಮತ್ತು ಸಂಜಯ್ ಬಂಗಾರ್ ಅವರೊಂದಿಗೆ ಚರ್ಚೆ ಮಾಡುತ್ತಿದ್ದೇನೆ. ಇದರ ಬಗ್ಗೆ ಕೆಲಸ ಮಾಡುತ್ತಿದ್ದು, ತಮ್ಮ ಆಟವನ್ನು ಅಭಿವೃದ್ದಿ ಪಡಿಸಿಕೊಳ್ಳುತ್ತಿರುವುದಾಗಿ ಅವರು ಹೇಳಿದ್ದಾರೆ.
26 ವರ್ಷದ ನಿತೀಶ್ ರಾಣಾ 46 ಐಪಿಎಲ್ ಪಂದ್ಯಗಳನ್ನಾಡಿದ್ದು, 1085 ರನ್ಗಳಿಸಿದ್ದಾರೆ. ಇದರಲ್ಲಿ 8 ಅರ್ಧಶತಕಗಳಿದ್ದು 85 ಅವರ ಗರಿಷ್ಠ ರನ್ ಆಗಿದೆ.