ಚಿತ್ತಗಾಂಗ್(ಬಾಂಗ್ಲಾದೇಶ): ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಹಿಡಿತ ಸಾಧಿಸಿದೆ. ಇಂದು ಎರಡನೇ ದಿನದಾಟದಲ್ಲಿ 404 ರನ್ಗಳಿಗೆ ಟೀಂ ಇಂಡಿಯಾ ಆಲೌಟಾಯಿತು. ಮೊದಲ ಇನ್ನಿಂಗ್ಸ್ ಆರಂಭಿಸಿದ ಬಾಂಗ್ಲಾ ದಿನದಂತ್ಯಕ್ಕೆ 133 ರನ್ಗಳಿಗೆ 8 ವಿಕೆಟ್ ಕಳೆದುಕೊಂಡು 271 ರನ್ಗಳ ಹಿನ್ನಡೆ ಅನುಭವಿಸಿದೆ. ಬಾಂಗ್ಲಾ ಬ್ಯಾಟರ್‌ಗಳನ್ನು ಕುಲ್ದೀಪ್ ಯಾದವ್ ಹಾಗು ಮಹಮ್ಮದ್ ಸಿರಾಜ್ ಇನ್ನಿಲ್ಲದಂತೆ ಕಾಡಿದರು.
ನಿನ್ನೆ ಮೊದಲ ದಿನದಾಟದ ಅಂತ್ಯಕ್ಕೆ ಭಾರತ 6 ವಿಕೆಟ್ ಕಳೆದುಕೊಂಡು 278 ರನ್ಗಳನ್ನು ಕಲೆ ಹಾಕಿತ್ತು. ಇಂದು ಎರಡನೇ ದಿನದಾಟ ಶುರು ಮಾಡಿದ ಟೀಂ ಇಂಡಿಯಾ ಆಟಗಾರರು 126 ರನ್ಗಳನ್ನು ಸೇರಿಸಿ ತಂಡದ ಮೊತ್ತವನ್ನು 404ಕ್ಕೆ ಹೆಚ್ಚಿಸಿದರು. ತಮ್ಮ ಇನ್ನಿಂಗ್ಸ್ ಆರಂಭಿಸಿದ ಬಾಂಗ್ಲಾ ಆಟಗಾರರು ಆರಂಭದಿಂದಲೇ ಮುಗ್ಗರಿಸಿದರು.
ಇನ್ನಿಂಗ್ಸ್ನ ಮೊದಲ ಎಸತದಲ್ಲೇ ನಜ್ಮುಲ್ ಹೊಸೈನ್ ಶಂಟೋ ಅವರಿಗೆ ಮೊಹಮ್ಮದ್ ಸಿರಾಜ್ ಪೆವಿಲಿಯನ್ ದಾರಿ ತೋರಿಸಿ ಶಾಕ್ ಕೊಟ್ಟರು. ನಂತರ ಬಂದ ಯಾಸಿರ್ ಅಲಿ ಕೂಡ 4 ರನ್ಗಳಿಗೆ ಉಮೇಶ್ ಯಾದವ್ ಎಸೆತದಲ್ಲಿ ಬೌಲ್ಡ್ ಆದರು. ಇದರ ಬಳಿಕ ಜೊತೆಯಾದ ಲಿಟ್ಟನ್ ದಾಸ್ ಮತ್ತು ಜಾಕೀರ್ ಹಸನ್ 34 ರನ್ಗಳ ಜೊತೆಯಾಟ ನೀಡಿದರು. ಆದರೆ, ತಂಡದ ಮೊತ್ತ 39 ರನ್ಗಳಾಗಿದ್ದ ಲಿಟ್ಟನ್ ದಾಸ್ (20) ಅವರ ವಿಕೆಟ್ ಅನ್ನು ಮೊಹಮ್ಮದ್ ಸಿರಾಜ್ ಉರುಳಿಸಿದರು.
ಇದಾದ ನಂತರ, ಜಾಕೀರ್ ಹಸನ್ ಕೂಡ ತುಂಬಾ ಹೊತ್ತು ಕ್ರೀಸ್ನಲ್ಲಿ ಉಳಿಯಲಿಲ್ಲ. ಸಿರಾಜ್ ಬೌಲಿಂಗ್ನಲ್ಲಿ ರಿಷಭ್ ಪಂತ್ ಕೈಗೆ ಜಾಕೀರ್ (20) ಕ್ಯಾಚ್ ಕೊಟ್ಟು ಪೆವಿಲಿಯನ್ ಹಾದಿ ಹಿಡಿದರು. ಇದರ ನಡುವೆ ಮುಶ್ಫಿಕರ್ ರಹೀಮ್ಗೆ ಕ್ರೀಸ್ ಕಚ್ಚಿ ಆಡಲು ಪ್ರಯತ್ನಿಸಿದರು. ಆದರೆ, ಅವರಿಗೂ ಸರಿಯಾದ ಸಾಥ್ ಸಿಗಲಿಲ್ಲ. ಶಕೀಬ್ ಅಲ್ ಹಸನ್ ಅವರನ್ನು 3 ರನ್ಗಳಿಗೆ ಕುಲ್ದೀಪ್ ಯಾದವ್ ಔಟ್ ಮಾಡಿದರು.
ನಂತರ ಬಂದ ನೂರುಲ್ ಹಸನ್ (16) ಅವರಿಗೂ ಕುಲ್ದೀಪ್ ಪೆವಿಲಿಯನ್ ದಾರಿ ತೋರಿಸಿದರು. ಇದಾದ ಬಳಿಕ ಮುಶ್ಫಿಕರ್ ರಹೀಮ್ (28) ಅವರನ್ನೂ ಕುಲ್ದೀಪ್ ಎಲ್ಬಿ ಬಲೆಗೆ ಕೆಡವಿದರು. ಅಲ್ಲದೇ, ತೈಜುಲ್ ಇಸ್ಲಾಂ ಅವರನ್ನು ಶೂನ್ಯಕ್ಕೆ ಬೌಲ್ಡ್ ಮಾಡಿ ಕುಲ್ದೀಪ್ ಮತ್ತೆ ಶಾಕ್ ಕೊಟ್ಟರು. ಇದರಿಂದಾಗಿ ದಿನದಾಟ ಅಂತ್ಯಕ್ಕೆ ಬಾಂಗ್ಲಾ 133 ರನ್ಗಳಿಗೆ 8 ವಿಕೆಟ್ ಕಳೆದುಕೊಂಡಿತು. ಮೂರನೇ ದಿನದಾಟಕ್ಕೆ ಮೆಹಿದಿ ಹಸನ್ ಮಿರಾಜ್ (16*) ಮತ್ತು ಎಬಾಡೋಟ್ ಹೊಸೈನ್ (13*) ಕ್ರೀಸ್ ಕಾಯ್ದುಕೊಂಡಿದ್ದಾರೆ.
ಟೀಂ ಇಂಡಿಯಾ ಪರ 10 ಓವರ್ಗಳನ್ನು ಎಸೆದ ಕುಲ್ದೀಪ್ 3 ಮೇಡನ್ಗಳೊಂದಿಗೆ 33 ರನ್ ನೀಡಿ 4 ವಿಕೆಟ್ ಕಬಳಿಸಿ ಮಿಂಚಿದರು. ಮೊಹಮ್ಮದ್ ಸಿರಾಜ್ ಸಹ 9 ಓವರ್ ಬೌಲ್ ಮಾಡಿ 1 ಮೇಡನ್ನೊಂದಿಗೆ ಕೇವಲ 14 ರನ್ ನೀಡಿ 3 ವಿಕೆಟ್ ಪಡೆದರು. ಉಮೇಶ್ ಯಾದವ್ 1 ವಿಕೆಟ್ ಪಡೆದರು.
ಇದನ್ನೂ ಓದಿ: India vs Bangladesh 1st test: 404 ರನ್ಗೆ ಭಾರತ ಆಲೌಟ್, ಬಾಂಗ್ಲಾಗೆ ಆರಂಭಿಕ ಆಘಾತ