ಕಲರ್ಸ್ ಕನ್ನಡ ವಾಹಿನಿಯ ಕಿನ್ನರಿ ಧಾರಾವಾಹಿಯ ಮಣಿಯಾಗಿ ಮಿಂಚಿದ ಕುಂದಾಪುರದ ಭೂಮಿ ಶೆಟ್ಟಿ ರಾಯಲ್ ಶೆಟ್ರು ಎಂದು ವೀಕ್ಷಕರಿಗೆ ಪರಿಚಿತರಾಗಿದ್ದು ದೊಡ್ಮನೆಯೊಳಗೆ ಕಾಲಿಟ್ಟ ನಂತರವೇ. ಬಿಗ್ ಬಾಸ್ ಸೀಸನ್ 7 ರ ಸ್ಪರ್ಧಿಯಾಗಿ ಕರ್ನಾಟಕದಾದ್ಯಂತ ಮನೆ ಮಾತಾಗಿರುವ ಭೂಮಿ ಶೆಟ್ಟಿ ಬಿಗ್ ಬಾಸ್ ಮನೆಯಿಂದ ಬಂದ ಬಳಿಕ ಮನೆಯವರೊಂದಿಗೆ ಕಾಲ ಕಳೆಯಬೇಕೆಂದು ಬಯಸಿದ್ದರು. ಆದರೆ ಅದರ ಮೊದಲೇ ಲಾಕ್ ಡೌನ್ ಘೋಷಿಸಲಾಗಿದ್ದು ಭೂಮಿ ಮಹಾನಗರಿಯಲ್ಲಿ ಲಾಕ್ ಆಗಿ ಬಿಟ್ಟಿದ್ದರು.
ಒಂದು ವಾರ ಅದು ಹೇಗೋ ಏಕಾಂಗಿಯಾಗಿ ಕಳೆದ ಭೂಮಿ ಮುಂದೆ ಸಹೋದರಿ ಮನೆಗೆ ಹೇಗೋ ಶಿಫ್ಟ್ ಆಗಿಬಿಟ್ಟರು. ಅಲ್ಲಿ ಆಕೆಯೊಂದಿಗೆ ಸಮಯ ಕಳೆಯುತ್ತಿರುವ ಭೂಮಿ ಶೆಟ್ಟಿ ಸಹೋದರಿ ಸಹಾಯದಿಂದ ಕೀಬೋರ್ಡ್ ನುಡಿಸುವುದನ್ನು ಕಲಿತಿದ್ದಾರೆ. ಕ ಲಗ್ ಹೋ ನಾ ಹೋ ಹಾಡನ್ನು ಮೊದಲ ಬಾರಿಗೆ ನುಡಿಸಿದ ಭೂಮಿಗೆ ಕೀಬೋರ್ಡ್ ಮೇಲಿನ ಲವ್ ಜಾಸ್ತಿಯಾಗಿದೆ. ಮತ್ತೆ ಪ್ರತಿದಿನ ಪ್ರಾಕ್ಟೀಸ್ ಮಾಡಲು ಆರಂಭಿಸಿ ಕೀ ಬೋರ್ಡ್ ನುಡಿಸುವುದನ್ನ ಕಲಿತಿದ್ದಾರೆ.
ಲಾಕ್ ಡೌನ್ ಸಮಯಗಿಂತ ಬಿಗ್ ಬಾಸ್ ಮನೆಯ ವಾಸ ಬಹಳ ಸೊಗಸಾಗಿತ್ತು ಎನ್ನುತ್ತಾರೆ ಕಿರುತೆರೆಯ ಕಿನ್ನರಿ ಭೂಮಿ ಶೆಟ್ಟಿ. "ಎಲ್ಲದಕ್ಕಿಂತಲೂ ಮುಖ್ಯವಾಗಿ ಬಿಗ್ ಬಾಸ್ ಮನೆಯಲ್ಲಿ ಸ್ನೇಹಿತರಿದ್ದರು. ಪ್ರತಿದಿನ ಒಂದಲ್ಲ ಒಂದು ಚಟುವಟಿಕೆ ಇರುತ್ತಿತ್ತು. ಒಟ್ಟಿನಲ್ಲಿ ಮೋಜು ಮಸ್ತಿ ಮಾಡುತ್ತಿದ್ದೆವು. ಆ ಕಾರಣದಿಂದ ಬಿಗ್ ಬಾಸ್ ಮನೆಯಲ್ಲಿ ದಿನ ಕಳೆದದ್ದು ಗೊತ್ತಾಗಲೇ ಇಲ್ಲ ಎನ್ನುತ್ತಾರೆ ಭೂಮಿ.
ವರ್ಕೌಟ್ ಗೆ ಬೈ ಹೇಳಿದ ರಾಯಲ್ ಶೆಟ್ರು:
ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲೇ ಇರುವ ಕಾರಣ ಫಿಟ್ನೆಸ್ ಬಗ್ಗೆ ಗಮನ ಹರಿಸಬೇಕಾದುದು ತುಂಬಾ ಮುಖ್ಯ. ಮಾತ್ರವಲ್ಲ, ಎಲ್ಲರೂ ಮನೆಯಲ್ಲೇ ವರ್ಕೌಟ್ ಮಾಡುತ್ತಾರೆ. ಅದರಲ್ಲಿ ಕಲಾವಿದರು ಎಂದ ಮೇಲೆ ಮಿಸ್ ಮಾಡುವುದೇ ಇಲ್ಲ. ಆದ್ರೆ ಲಾಕ್ಡೌನ್ ಆರಂಭವಾದ ಸಮಯದಲ್ಲಿ ಒಂದಷ್ಟು ವರ್ಕೌಟ್ ಮಾಡಿದ್ದರು. ಆದರೆ ಇದೀಗ ವರ್ಕೌಟ್ ಮಾಡಲು ಕೂಡಾ ಬೇಸರಿಸಿಕೊಂಡಿರುವ ಕಿನ್ನರಿ ಲಾಕ್ಡೌನ್ ನಿಂದಾಗಿ ಅಡುಗೆ ಮಾಡಲು ಕಲಿತಿದ್ದಾರಂತೆ. ಅವಕಾಶ ಸಿಕ್ಕರೆ ಮತ್ತೆ ಕಿರುತೆರೆ ಕಡೆ ಮುಖ ಮಾಡಲು ತಯಾರಾಗಿದ್ದಾರೆ ನಮ್ಮ ಕುಂದಾಪುರದ ಖನಿ ರಾಯಲ್ ಶೆಟ್ರು.