ನೆಲ್ಯಾಡಿ(ದ.ಕ): ರೌಡಿಶೀಟರ್ ಹತ್ಯೆ ಪ್ರಕರಣದ ಆರೋಪಿಯೊಬ್ಬನ ಕಾಲಿಗೆ ಬಂಟ್ವಾಳ ಪೊಲೀಸರು ಗುಂಡಿನ ದಾಳಿಗೈದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ಖಲೀಲ್ ಎಂಬಾತ ಮಂಗಳೂರು- ಬೆಂಗಳೂರು ಹೆದ್ದಾರಿ ಮೂಲಕ ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದ. ನಿನ್ನೆ ಬೆಳಗ್ಗೆ ಓರ್ವ ಪೊಲೀಸರ ಕಾರ್ಯಾಚರಣೆಯಿಂದ ಬಂಧಿತನಾಗಿದ್ದ. ನಂತರದಲ್ಲಿ ಕಾಡಿನಲ್ಲಿ ತಪ್ಪಿಸಿಕೊಂಡು ಹೋಗುತ್ತಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶನಿವಾರರ ಮುಂಜಾನೆ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಪೆರಿಯಶಾಂತಿ ಸಮೀಪದ ರೆಖ್ಯಾದಲ್ಲಿ ಈ ಘಟನೆ ನಡೆದಿದ್ದು, ಮೂವರು ಆರೋಪಿಗಳು ಕಾರಿನಲ್ಲಿ ಬೆಂಗಳೂರು ಕಡೆಗೆ ಪರಾರಿಯಾಗಲು ತೆರಳುತ್ತಿದ್ದರು. ಈ ವೇಳೆ ಕಾರನ್ನು ಪೊಲೀಸರು ಬೆನ್ನಟ್ಟಿ ಅಡ್ಡಗಟ್ಟಿದ್ದು, ಆರೋಪಿಗಳು ಕಾಡು ದಾರಿ ಹಿಡಿದು ತಪ್ಪಿಸಲು ಯತ್ನಿಸಿದ್ದರು.
ಈ ವೇಳೆ ಬಂಟ್ವಾಳ ಠಾಣಾ ಪಿಎಸ್ಐ ಅವಿನಾಶ್ ಅವರು ಫೈರಿಂಗ್ ನಡೆಸಿದರು. ಆರೋಪಿ ಇಬ್ರಾಹಿಂ ಖಲೀಲ್ ಕಾಲಿಗೆ ಗುಂಡು ತಗಲಿದು. ಬಳಿಕ ಆತನನ್ನು ಪೊಲೀಸರು ವಶಕ್ಕೆ ಪಡೆದು ಚಿಕಿತ್ಸೆ ಕೊಡಿಸಿದರು. ಮತ್ತಿಬ್ಬರು ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಂಡರು. ನಂತರದಲ್ಲಿ ಉಪ್ಪಿನಂಗಡಿ, ಧರ್ಮಸ್ಥಳ, ನೆಲ್ಯಾಡಿ, ಬಂಟ್ವಾಳ ಪೊಲೀಸರು ಕಾರ್ಯಚರಣೆ ನಡೆಸಿ ಈ ಇಬ್ಬರನ್ನೂ ಬಂಧಿಸಿದ್ದಾರೆ.
ಪಾಣೆಮಂಗಳೂರು ಸಮೀಪದ ನಂದಾವರ ಕೋಟೆ ನಿವಾಸಿ ಖಲೀಲ್ ಯಾನೆ ಇಬ್ರಾಹಿಂ ಖಲೀಲ್ (27 ) ಬೆಳಗ್ಗೆ ಬಂಧಿತನಾದ. ಹಫೀಜ್ ಯಾನೆ ಅಪ್ಪಿ (28) ಹಾಗೂ ತಪ್ಪಿಸಿಕೊಳ್ಳಲು ನೆರವಾಗಿದ್ದ ಕಾರು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದಕ್ಷಿಣ ಕನ್ನಡ ಎಸ್.ಪಿ. ಲಕ್ಷ್ಮೀಪ್ರಸಾದ್ ನೇತೃತ್ವದ ವಿಶೇಷ ತಂಡ ಕಾರ್ಯಾಚರಣೆ ನಡೆಸಿದೆ.