ಬಾಲಿವುಡ್ ಸೆಲೆಬ್ರಿಟಿಗಳಾದ ಅಮಿತಾಭ್ ಬಚ್ಚನ್ ಮತ್ತು ಅನುಷ್ಕಾ ಶರ್ಮಾ ಅವರು ತಮ್ಮ ಐಷಾರಾಮಿ ಕಾರುಗಳನ್ನು ಬಿಟ್ಟು, ಕೆಲಸಕ್ಕೆ ತಲುಪುವ ಸಲುವಾಗಿ ಬೈಕ್ ಏರುವ ಮೂಲಕ ಸದ್ದು ಮಾಡಿದ್ದಾರೆ. ವೇಗದ ಸಾರಿಗೆ ವಿಧಾನವನ್ನು ಆರಿಸಿಕೊಂಡಿದ್ದು, ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮುಂಬೈ ಟ್ರಾಫಿಕ್ ತಪ್ಪಿಸಲು ಇಬ್ಬರೂ ಬೈಕ್ ರೈಡ್ ಮಾಡಿದ್ದಾರೆ. ಭಾನುವಾರದಂದು ಬಿಗ್ ಬಿ ಬೈಕ್ನಲ್ಲಿ ತೆರೆಳಿದ್ದರೆ, ಸೋಮವಾರ ಬೆಳಗ್ಗೆ ಅನುಷ್ಕಾ ಶರ್ಮಾ ಅವರು ಬೈಕ್ನಲ್ಲಿ ಸಂಚರಿಸಿದ್ದು, ಅವರನ್ನು ಪಾಪರಾಜಿಗಳು ಸೆರೆಹಿಡಿದಿದ್ದಾರೆ.

ಬೈಕ್ ಸಂಚಾರದ ಫೋಟೋಗಳು ಮತ್ತು ವಿಡಿಯೋಗಳು ಆನ್‌ಲೈನ್‌ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಚಿತ್ರಗಳು ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿವೆ. ಅದಾಗ್ಯೂ, ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಸೆಲೆಬ್ರಿಟಿಗಳು, ಬೈಕ್ ಸವಾರರು ಹೆಲ್ಮೆಟ್ ಧರಿಸಿಲ್ಲ ಎಂದು ದೂರಿದ್ದಾರೆ. ಟ್ವಿಟರ್ ಸೇರಿದಂತೆ ಸಾಮಾಜಿಕ ಮಾಧ್ಯಮದ ಹಲವು ವೇದಿಕೆಗಳಲ್ಲಿ ನೆಟಿಜನ್‌ಗಳು ಈ ಕ್ರಮದ ಬಗ್ಗೆ ಆಕ್ಷೇಪಿಸಿದ್ದಾರೆ. ಹೆಲ್ಮೆಟ್ ಇಲ್ಲದೇ ಸೆಲೆಬ್ರಿಟಿಗಳು ಸಂಚಾರ ಮಾಡಿದ ಬಗ್ಗೆ ತಿಳಿಸಲು ಮುಂಬೈ ಪೊಲೀಸರನ್ನು ಟ್ಯಾಗ್ ಮಾಡಿ ಫೋಟೋ ಶೇರ್ ಮಾಡಿದ್ದಾರೆ. ಪೊಲೀಸರು ಟ್ವೀಟ್‌ಗೆ ಪ್ರತಿಕ್ರಿಯಿಸಿ, "ನಾವು ಇದನ್ನು ಟ್ರಾಫಿಕ್ ಪೊಲೀಸರೊಂದಿಗೆ ಹಂಚಿಕೊಂಡಿದ್ದೇವೆ. @MTPHereToHelp" ಎಂದು ತಿಳಿಸಿದ್ದಾರೆ.
ಭಾನುವಾರ ಬಿಗ್ ಬಿ ತಮ್ಮ ಬೈಕ್ ಸವಾರಿಯ ಚಿತ್ರವನ್ನು ಶೇರ್ ಮಾಡಿದ್ದರು. " ಈ ಸವಾರಿಗೆ ಧನ್ಯವಾದಗಳು. ನೀವು ಯಾರೆಂದು ಗೊತ್ತಿಲ್ಲ. ಆದರೆ ನೀವು ನನ್ನನ್ನು ಕೆಲಸದ ಸ್ಥಳಕ್ಕೆ ಸಮಯಕ್ಕೆ ಸರಿಯಾಗಿ ಕರೆದೊಯ್ದಿದ್ದೀರಿ. ವೇಗವಾಗಿ ಮತ್ತು ಪರಿಹರಿಸಲಾಗದ ಟ್ರಾಫಿಕ್ ಜಾಮ್ ಸಮಸ್ಯೆಯಿಂದ ತಪ್ಪಿಸಿ ನನ್ನ ಕೆಲಸಕ್ಕೆ ಸಹಾಯ ಮಾಡಿದ್ದೀರಿ. ಕ್ಯಾಪ್, ಶಾರ್ಟ್ಸ್ ಮತ್ತು ಯೆಲ್ಲೋ ಟೀ ಶರ್ಟ್ ಮಾಲೀಕರಿಗೆ ಧನ್ಯವಾದಗಳು" ಎಂದು ಬಿಗ್ ಬಿ ಬರೆದುಕೊಂಡಿದ್ದರು. ಅಮಿತಾಭ್ ಬಚ್ಚನ್ ಅಲ್ಲದೇ ಅನುಷ್ಕಾ ಶರ್ಮಾ ಕೂಡ ಹೆಲ್ಮೆಟ್ ಇಲ್ಲದೇ ಬೈಕ್ ಸವಾರಿ ನಡೆಸಿರುವ ಫೋಟೋಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ. ಈ ಬಗ್ಗೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೈಕ್ ಸವಾರಿ ವೇಳೆ ಹೆಲ್ಮೆಟ್ ಧರಿಸುವಿಕೆ ಕಡ್ಡಾಯ.
ಇದನ್ನೂ ಓದಿ: ಹೆಂಡತಿ ಬಗ್ಗೆ ಬಹಿರಂಗವಾಗಿ ದೂರಿದ ಕಿಂಗ್ ಖಾನ್: ಖ್ಯಾತ ವಿನ್ಯಾಸಕಿಯಾದ್ರೂ ತನ್ನ ಕೋಣೆ ವಿನ್ಯಾಸ ಮಾಡಿಲ್ಲ ಎಂದ ಶಾರುಖ್
ಕೆಲಸದ ವಿಚಾರ ಗಮನಿಸುವುದಾದರೆ, ನಾಗ್ ಅಶ್ವಿನ್ ಅವರ ಪ್ರಾಜೆಕ್ಟ್ ಕೆ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಮತ್ತು ಪ್ರಭಾಸ್ ಜೊತೆಗೆ ಬಿಗ್ ಬಿ ಕಾಣಿಸಿಕೊಳ್ಳಲಿದ್ದಾರೆ. ಇದು ಎರಡು ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗುತ್ತಿರುವ ದ್ವಿಭಾಷಾ ಚಲನಚಿತ್ರವಾಗಿದೆ. ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ಸಿನಿಮಾ ತೆರೆ ಕಾಣಲಿದೆ. ರಿಭು ದಾಸ್‌ಗುಪ್ತಾ ಅವರ ಸೆಕ್ಷನ್ 84 ಸಿನಿಮಾದಲ್ಲಿಯೂ ಸಹ ಕಾಣಿಸಿಕೊಳ್ಳಲಿದ್ದಾರೆ. ಇನ್ನು ನಟಿ ಅನುಷ್ಕಾ ಶರ್ಮಾ ಅವರು ಪ್ರೊಸಿತ್ ರಾಯ್ ಅವರ 'ಚಕ್ಡಾ ಎಕ್ಸ್‌ಪ್ರೆಸ್'ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ಅವರು ಮಹಿಳಾ ಕ್ರಿಕೆಟರ್ ಜೂಲನ್ ಗೋಸ್ವಾಮಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಟಾಪ್ ಕ್ರಿಕೆಟರ್ ವಿರಾಟ್ ಕೊಹ್ಲಿ ಪತ್ನಿ ಓರ್ವ ಕ್ರಿಕೆಟರ್ ಪಾತ್ರಕ್ಕೆ ಜೀವ ತುಂಬುತ್ತಿರುವುದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ವಿಕ್ಕಿ ಕೌಶಲ್ - ಕತ್ರೀನಾ ಕೈಫ್ ವಿಚ್ಛೇದನ ಪಡೆಯಲಿದ್ದಾರಾ? ಹೀಗೊಂದು ಸುದ್ದಿ ವೈರಲ್!