ಮೈಸೂರು: ಮಲೇಷ್ಯಾದಲ್ಲಿ ಮಗ ಸುಮಂತ್ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಕುರಿತು ಕೇಂದ್ರ ಸರ್ಕಾರ ತನಿಖೆ ನಡೆಸಿ ನ್ಯಾಯ ಒದಗಿಸಿಕೊಡಬೇಕು ಎಂದು ಸುಮಂತ್ ಅವರ ತಾಯಿ ಭಾಗ್ಯ ಒತ್ತಾಯಿಸಿದ್ದಾರೆ.
ಡಿಪ್ಲೊಮಾ ಮುಗಿಸಿ 9 ತಿಂಗಳ ಹಿಂದೆ ಲಕ್ಷಾಂತರ ರೂಪಾಯಿ ಸಂಬಳ ಎಂದು ಮಲೇಷ್ಯಾಕ್ಕೆ ಹೋದ. ಇಲ್ಲಿಂದ ಹೋಗಲು ಕಾರಣವಾದ ವ್ಯಕ್ತಿ ಯಾರು? ಅಲ್ಲಿ ಕಷ್ಟಕ್ಕೆ ಸಿಲುಕಿದ್ದರ ಬಗ್ಗೆ ಪಿರಿಯಾಪಟ್ಟಣದ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ದುಃಖ ಹಂಚಿಕೊಂಡಿದ್ದು ಹೀಗೆ.
ನನ್ನ ಮಗ ತರಬೇತಿಗೆಂದು ಬೆಂಗಳೂರಿಗೆ ಹೋಗಿದ್ದ. ಅಲ್ಲಿಂದ ಲಕ್ನೋಗೂ ಸಹ ಹೋಗಿದ್ದನು. ಫಲಿತಾಂಶ ಬರಲು 3 ತಿಂಗಳು ಆಗುತ್ತದೆ ಎಂದು ಹೇಳಿ ಕಾಯುತ್ತಿದ್ದ. ತರಬೇತಿ ಪಡೆಯುತ್ತಿದ್ದ ಸಂದರ್ಭದಲ್ಲಿ ಗೋವಾ ಮೂಲದ ಮನೀಶ್ ಪಾಟೀಲ್ ಎಂಬಾತ ಪರಿಚಯವಾಗಿದ್ದ. ಪ್ರತಿದಿನ ಕರೆ ಮಾಡಿ ತಲೆಕೆಡಿಸಿ ಆಲ್ ಟ್ಯಾಂಕರಿಂಗ್ ಕೆಲಸ ಎಂದೇಳಿ ಇಲ್ಲಿಂದ ಕರೆದುಕೊಂಡು ಹೋದ.
ಇಲ್ಲಿಂದ ಹೋಗಲು ₹ 3.30 ಲಕ್ಷ ರೂಪಾಯಿ ಅಗತ್ಯವಿದೆ ಎಂದಾಗ ಹಣವನ್ನು ಹೇಗೋ ಹೊಂದಿಸಿಕೊಟ್ಟೆವು. ಅಷ್ಟು ದೂರ ಬೇಡ ಎಂದು ಹೇಳಿದ್ದೆವು. ಆದರೆ, ಮನೀಶ್ ಪಾಟೀಲ್ ತಲೆ ಕೆಡಿಸಿ ಬಿಟ್ಟಿದ್ದ ಕಾರಣ ನಮ್ಮ ಮಾತಿಗೆ ಕಿವಿಗೊಡಲಿಲ್ಲ. ಉತ್ತಮವಾದ ಕೆಲಸ ₹ 35 ಸಾವಿರ ವೇತನ ಎಂದು ಕರೆದುಕೊಂಡು ಹೋಗಿ ಮೋಸ ಮಾಡಿದರು ಎಂದು ಕಣ್ಣೀರಿಟ್ಟರು.
ಮೊದಲು ಲಕ್ಷ ರೂಪಾಯಿ ಕಟ್ಟಿದ್ದೆವು. ಪೂರ್ತಿ ಕಟ್ಟುವಂತೆ ಬೆದರಿಸಿ ಕೋಣೆಯೊಂದರಲ್ಲಿ ಕೂಡಿ ಹಾಕಿದ್ದರಂತೆ. ಹಣ ಕಟ್ಟಿದರೆ ಮಾತ್ರ ಕೆಲಸ ಎಂದಿದ್ದರಂತೆ. ಪ್ರತಿದಿನ ಕರೆ ಮಾಡುತ್ತಿದ್ದ. ವಿಡಿಯೋ ಕಾಲ್ ಮಾಡುತ್ತಿದ್ದ. ಆಲ್ ಟ್ಯಾಂಕರಿಂಗ್ ಎಂದು ಹೇಳಿ ಈಗ ₹ 18 ಸಾವಿರ ಮಾತ್ರ ಸಂಬಳ ಕೊಡುತ್ತಿದ್ದಾರೆ ಅಮ್ಮ ಎಂದು ಹೇಳುತ್ತಿದ್ದ ಎಂದು ಸುಮಂತ್ ಅನುಭವಿಸಿದ್ದ ರೋಧನೆಯನ್ನು ಬಿಚ್ಚಿಟ್ಟರು.
ಸರಿಯಾದ ವ್ಯವಸ್ಥೆ ಇರಲಿಲ್ಲ. ಆದರೂ ಸುಮಂತ್ ನಮ್ಮೊಂದಿಗೆ ಏನನ್ನೂ ಹೇಳುತ್ತಿರಲಿಲ್ಲ. 3 ತಿಂಗಳಿಂದ ಸಂಬಳ ಕೊಟ್ಟಿಲ್ಲ ಎಂದಿದ್ದ. ಇದೇ 8ರಂದು ಬರುತ್ತೇನೆ ಎಂದಿದ್ದ. ನಂತರ ಸಂಬಳ ಕೊಟ್ಟಿಲ್ಲ ₹ 15ರಂದು ಬರುತ್ತೇನೆ ಎಂದಿದ್ದ. ಆಗಲೂ ಅವರು ಕೊಟ್ಟಿಲ್ಲ 25ರಂದು ವಿಮಾನ ಬುಕ್ ಮಾಡಿದ್ದೇನೆ ಎಂದಿದ್ದ. ಇಲ್ಲಿಗೆ ಬರಲು ಟಿಕೆಟ್ ಬುಕ್ ಮಾಡಿದ್ದನ್ನೂ ಫೋಟೋ ಕಳುಹಿಸಿದ್ದನು. ಅವರು ಆಗಲೂ ವೇತನ ನೀಡದ ಕಾರಣ ಮಲೇಷಿಯಾದಲ್ಲಿಯೇ ಸ್ನೇಹಿತರಿಂದ ಹಣ ಪಡೆದು ಬುಕ್ ಮಾಡಿದ್ದೇನೆ ಎಂದು ಹೇಳಿದ್ದ.
ಶನಿವಾರ ಸಂಜೆ ಕರೆ ಮಾಡಿದ್ದೆ. ಆಗ ಸುಮಂತ್, ಅಮ್ಮ ಹೊಟ್ಟೆ ಹಸಿಯುತ್ತಿಲ್ಲ. ಇಲ್ಲಿ ನೆಟ್ವರ್ಕ್ ಸಿಗುತ್ತಿಲ್ಲ ಎಂದು ಹೇಳಿದ್ದನು. ಮತ್ತೆ ಬೆಳಿಗ್ಗೆ ಕರೆ ಮಾಡಿದೆ. ಆದರೆ, ಸ್ವೀಕರಿಸಲಿಲ್ಲ. ಮನೀಶ್ ಪಾಟೀಲ್ಗೆ ಕರೆ ಮಾಡಿದರೆ ಏನೂ ಗೊತ್ತೇ ಇಲ್ಲ ಎಂದನು. ಆತನಿಂದಲೇ ಇದೆಲ್ಲ. ಆತನಿಗೆ ನಾನು ಬೇಡ ಎಂದರೂ ಮಗ ನನ್ನ ಮಾತು ಕೇಳಲಿಲ್ಲ. ನನ್ನ ಮಗನ ಮೊಬೈಲ್ನಲ್ಲಿ ಎಲ್ಲಾ ಮಾಹಿತಿ ಇದೆ. ಅದು ಸಿಕ್ಕರೆ ಎಲ್ಲವೂ ಗೊತ್ತಾಗುತ್ತದೆ ಎಂದರು.