ಮೈಸೂರು: ಬಿಜೆಪಿ ಪಕ್ಷವಲ್ಲ. ಅದೊಂದು ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಗ್ಯಾಂಗ್ ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಆಕ್ರೋಶ ಹೊರಹಾಕಿದರು.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತದಲ್ಲಿ ಪಕ್ಷ ರಾಜಕಾರಣ ಧ್ವಂಸವಾಗಿದೆ. ಬಿಜೆಪಿ ಪಕ್ಷವು ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಎಲ್ಲಾ ಪಕ್ಷಗಳನ್ನು ನಿತ್ರಾಣ ಮಾಡಿದೆ. ಆದರೆ, ಮೊದಲು ಬಿಜೆಪಿ ಧ್ವಂಸಗೊಳಿಸಬೇಕು ಎಂದು ಕಿಡಿಕಾರಿದರು.
ಕೇಂದ್ರ ಸರ್ಕಾರ ಜನಾಭಿಪ್ರಾಯಕ್ಕೆ ಮನ್ನಣೆ ನೀಡುತ್ತಿಲ್ಲ. ಇವಿಎಂ ಧೈರ್ಯದಿಂದ ಈ ರೀತಿ ನಡೆದುಕೊಳ್ಳುತ್ತಿದ್ದಾರೆ ಎನ್ನಿಸುತ್ತದೆ. ಇವಿಎಂನಿಂದ ಗೋಲ್‌ಮಾಲ್ ಮಾಡಬಹುದು ಎಂಬ ಆತಂಕವಿದೆ. ಇದರಿಂದಲೇ ಅವರು ಸಾರ್ವತ್ರಿಕ ಅಭಿಪ್ರಾಯ ಕೇಳುತ್ತಿಲ್ಲ ಎನ್ನುವ ಅನುಮಾನ ಇದೆ ಎಂದರು. ಮಂಗಳೂರಿಗೆ ಪ್ರತಿಪಕ್ಷದ ನಾಯಕರನ್ನು ಹೋಗಲು ಬಿಡದಿರುವುದು ವಿನಾಶ ಕಾಲದ ಲಕ್ಷಣ. ಪ್ರತಿಪಕ್ಷದವರು ಅಲ್ಲಿಗೆ ಹೋಗಬಾರದು ಅಂದರೆ ಹೇಗೆ ಎಂದು ಪ್ರಶ್ನಿಸಿದರು.
ಪೌರತ್ವ ತಿದ್ದುಪಡಿ ಕಾಯ್ದೆಗೆ ವಿರೋಧ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ಕತ್ತಿ ಬಂದು ಭಾರತದ ನೆತ್ತಿ ಮೇಲೆ ನಿಂತಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್ಆರ್ಸಿ ಹೋರಾಟ ವಿದ್ಯಾರ್ಥಿಗಳ ಅಂಗಳಕ್ಕೆ ಬಂದಿದೆ. ವಿದ್ಯಾರ್ಥಿಗಳು ಅತ್ಯಂತ ಎಚ್ಚರಿಕೆ ಮತ್ತು ಹೊಣೆಗಾರಿಕೆಯಿಂದ ಹೋರಾಟವನ್ನು ಮುನ್ನಡೆಸಬೇಕಿದೆ ಎಂದು ಸಲಹೆ ನೀಡಿದರು.
ಮುಸ್ಲಿಂ ವೇಷ ತೊಟ್ಟು ರೈಲಿಗೆ ಕಲ್ಲು ಹೊಡೆಯುತ್ತಿದ್ದ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಅಂದರೆ ಹೋರಾಟ ದಿಕ್ಕು ತಪ್ಪಿಸುವಂತಹ ಸಾಧ್ಯತೆಗಳು ಹೆಚ್ಚಾಗಿವೆ. ಆದ್ದರಿಂದ ಅತ್ಯಂತ ಜಾಗ್ರತೆಯಿಂದಿರಬೇಕು. ಎನ್ಆರ್ಸಿ ಬಂದರೆ ಮೂಲ ನಿವಾಸಿಗಳನ್ನು ಒಕ್ಕಲೆಬ್ಬಿಸುವಂತಹ ಅಪಾಯ ಇದೆ. ವಲಸಿಗರು ಬರುವುದಕ್ಕಿಂತ ಮುಂಚೆ ದೇಶದಲ್ಲಿದ್ದ ಮೂಲ ನಿವಾಸಿಗಳ, ಆದಿವಾಸಿಗಳು, ಹಕ್ಕಪಿಕ್ಕಿ ಜನರಿಗೆ ಯಾವ ದಾಖಲೆಗಳಿವೆ. ಅವರೆಲ್ಲರನ್ನೂ ಕಾಡಿನಿಂದ ಹೊರಗಟ್ಟಲು ಸರ್ಕಾರ ಹುನ್ನಾರ ನಡೆಸಿದೆ ಎಂದರು.
ಆದಿವಾಸಿಗಳು ಕಾಡಿನಿಂದ ಹೊರಬಂದರೆ ಅರಣ್ಯ ಸಂಪತ್ತನ್ನ ಕಾರ್ಪೊರೇಟ್ ಕಂಪನಿಯ ಗಣಿಗಾರಿಕೆಗೆ ಒಪ್ಪಿಸಿ ಬಿಡಬಹುದು. ಆಗ ಬಿಜೆಪಿ ಸರ್ಕಾರವು ಇರೋದಿಲ್ಲ. ಕಂಪನಿ ಸರ್ಕಾರ ಅಧಿಕಾರದಲ್ಲಿ ಇರುತ್ತದೆ ಎಂದು ಎಚ್ಚರಿಕೆ ನೀಡಿದರು.