ಬೆಂಗಳೂರು: ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ದಿ ನಿಗಮದ ವತಿಯಿಂದ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಅರಿವು ಶೈಕ್ಷಣಿಕ ಸಾಲ ಯೋಜನೆಯನ್ನು ಹೊಸದಾಗಿ ಮಾರ್ಪಾಡು ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿ ತಿಳಿಸಿದರು.
ಇಂದು ಪ್ರಶ್ನೋತ್ತರ ವೇಳೆ ಕಾಂಗ್ರೆಸ್ ಸದಸ್ಯ ಪ್ರಿಯಾಂಕ ಖರ್ಗೆ ಅವರ ಪ್ರಶ್ನೆಗೆ ಉತ್ತರಿಸಿದ ಸಿಎಂ, ಅರಿವು ಶೈಕ್ಷಣಿಕ ಸಾಲ ಯೋಜನೆ ಈವರೆಗೂ ವೃತ್ತಿಪರ ಕೋರ್ಸ್‍ಗಳಿಗೆ ಮಾತ್ರ ನೀಡಲಾಗುತ್ತಿತ್ತು. ಇದನ್ನು ಮಾರ್ಪಾಡು ಮಾಡಿದರೆ ಪದವಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಮಾಡಲಾಗುವುದು ಎಂದು ಹೇಳಿದರು.
2019-20, 2020-21, 2021-22ನೇ ಸಾಲಿನಲ್ಲಿ ಅರಿವು ಶೈಕ್ಷಣಿಕ ಸಾಲ ಯೋಜನೆಯಲ್ಲಿ ಒಟ್ಟು 49,959 ವಿದ್ಯಾರ್ಥಿಗಳಿಗೆ 1,91,07,29,969 ಅನುದಾನ ನೀಡಲಾಗಿದೆ. ಈಗ ನಮ್ಮ ಸರ್ಕಾರ 6 ಸಾವಿರ ವಿದ್ಯಾರ್ಥಿಗಳಿಗೆ ಅನುದಾನ ಹೆಚ್ಚಿಸಿದೆ ಎಂದರು.
ರಾಜ್ಯದಲ್ಲಿ ಹೊಸ 100 ಪೊಲೀಸ್ ಠಾಣೆ: ರಾಜ್ಯದಲ್ಲಿ ಹೊಸ 100 ಪೊಲೀಸ್ ಠಾಣೆಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ ಪ್ರಶ್ನೆಗೆ ಉತ್ತರಿಸಿದರು.
ಈಗಾಗಲೇ ಹೊಸ ಪೊಲೀಸ್ ಠಾಣೆಗಳನ್ನು ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಶಿಥಿಲಾವಸ್ಥೆಯಲ್ಲಿರುವ ಠಾಣೆಗಳನ್ನು ಸಹ ಆಧುನೀಕರಣಗೊಳಿಸುವುದಾಗಿ ತಿಳಿಸಿದರು.
ಹಂತ ಹಂತವಾಗಿ ಕಾಮಗಾರಿಗಳ ಆರಂಭ: ರಾಜ್ಯದಲ್ಲಿರುವ ಎಲ್ಲ ಕೆರೆಗಳಿಗೆ ನೀರು ತುಂಬಿಸಲು ಕನಿಷ್ಠ ಪಕ್ಷ 1,20,000 ಕೋಟಿ ರೂ. ಬೇಕಾಗುತ್ತದೆ. ಅನುದಾನದ ಲಭ್ಯತೆ ಮೇಲೆ ಹಂತ ಹಂತವಾಗಿ ಕಾಮಗಾರಿಗಳನ್ನು ಆರಂಭಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು, ಶಾಸಕ ಭೀಮಾನಾಯಕ್ ಪ್ರಶ್ನೆಗೆ ಉತ್ತರಿಸಿದರು.
ಮಹಿಳಾ ದಿನಾಚರಣೆಗೆ ಶುಭ ಕೋರಿದ ಸ್ಪೀಕರ್: ಲಿಂಗ ಸಮಾನತೆ ರೂಪಿಸುವಲ್ಲಿ ನಮ್ಮ-ನಿಮ್ಮೆಲ್ಲರ ಪ್ರಮುಖ ಪಾತ್ರವಿದೆ ಎಂಬುದನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನಸಭೆಯಲ್ಲಿ ಹೇಳಿದರು.
ಸದನ ಆರಂಭವಾದ ಕೂಡಲೇ ಮಹಿಳಾ ದಿನಾಚರಣೆಯ ಶುಭಾಶಯ ಕೋರಿದ ಅವರು, ವಿಶ್ವಸಂಸ್ಥೆಯು 2022ನೇ ಸಾಲಿನ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಸುಸ್ಥಿರ ನಾಳೆಗಾಗಿ ಲಿಂಗ ಸಮಾನತೆ ಎಂಬ ಧ್ಯೇಯ ವಾಕ್ಯವನ್ನು ಘೋಷಿಸಿದೆ ಎಂದರು.
ಪ್ರಕೃತಿಯ ವಿಶೇಷ ಸೃಷ್ಟಿ, ಬದ್ಧತೆ, ಏಕಾಗ್ರತೆ ಹಾಗೂ ಧೈರ್ಯದ ಪ್ರತೀಕವೇ ಮಹಿಳೆ. ಸಾಕಷ್ಟು ಕಷ್ಟ, ನಷ್ಟಗಳನ್ನು ಎದುರಿಸಿ ಸಮಾಜದಲ್ಲಿ ಸಕಾರಾತ್ಮಕತೆಯನ್ನು ತುಂಬುತ್ತಿರುವ ಭರವಸೆಯ ಬೆಳಕು ಮಹಿಳೆ ಎಂದು ಶ್ಲಾಘಿಸಿದರು.
ಇದನ್ನೂ ಓದಿ: 'ಪಕ್ಷವನ್ನು ನೀವು ನಿಮ್ಮ ಹಿಡಿತಕ್ಕೆ ತೆಗೆದುಕೊಳ್ಳಿ': ಸಿದ್ದರಾಮಯ್ಯಗೆ ಯತ್ನಾಳ್ ಸಲಹೆ