ಬೆಂಗಳೂರು: ಪುನೀತ್ ರಾಜ್ ಕುಮಾರ್ ಅಪ್ರತಿಮ ಪ್ರತಿಭೆ. ಬಾಲನಟನಾಗಿಯೇ ಹೆಸರುವಾಸಿಯಾಗಿದ್ದರು. ಬಂಗಾರದಂತಹ ಮನುಷ್ಯ. ಹಿರಿಯರು, ಕಿರಿಯರು ಯಾರೇ ಇರಲಿ ಎಲ್ಲರಿಗೂ ಪ್ರೀತಿ ಹಂಚಿದ್ದರು. ನನ್ನ ಮನೆಯ ಮಗುವನ್ನು ಕಳೆದುಕೊಂಡಷ್ಟು ದುಃಖ ಆಗಿದೆ ಎಂದು ಹಿರಿಯ ನಟಿ ಉಮಾಶ್ರೀ ಕಣ್ಣೀರು ಹಾಕಿದ್ದಾರೆ.
ಪುನೀತ್ ರಾಜ್‌ಕುಮಾರ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿದ ಅವರು, 10 ದಿನಗಳ ಹಿಂದೆ ರತ್ನನ್ ಪ್ರಪಂಚ ಸಿನಿಮಾ ನೋಡಿದಾರೆ. ಅದರ ಒಂದು ಶಾಟ್ ಬಗ್ಗೆ ಬಹಳಷ್ಟು ಚರ್ಚೆ ಮಾಡಿದಾರೆ. ನನ್ನತ್ರ ನೇರವಾಗಿ ಮಾತನಾಡ್ಬೇಕು ಅಂತ ಆಸೆ ಪಟ್ಟಿದ್ರು. ಆದ್ರೆ ಆಗಿರಲಿಲ್ಲ ಎಂದು ಉಮಾಶ್ರೀ ಭಾವುಕರಾದರು.
'ಸಾಂತ್ವನದ ಮಾತಿಗೂ ಬಾಯಿ ಹೊರಳುತ್ತಿಲ್ಲ'
ನಟಿ ಮಾಳವಿಕಾ ಅವಿನಾಶ್ ಮಾತನಾಡಿ, ಪುನೀತ್ ಚೈಲ್ಡ್ ಸ್ಟಾರ್, ನಂತರ ಪವರ್ ಸ್ಟಾರ್, ಒಳ್ಳೆಯ ಗಾಯಕ, ನೃತ್ಯಗಾರ. ಸಾಂತ್ವನದ ಮಾತಿಗೂ ಬಾಯಿ ಹೊರಳುತ್ತಿಲ್ಲ, ಪೂರ್ತಿ ಬ್ಲಾಂಕ್ ಆಗಿದೇನೆ. ಕುಟುಂಬಸ್ಥರಿಗೆ ದೇವರು ಈ ನೋವು ಅರಗಿಸಿಕೊಳ್ಳುವ ಶಕ್ತಿ ಕೊಡಲಿ ಎಂದರು.
ಅಪ್ಪು ಜೊತೆ ನಟಿಸಿಕೊಂಡು ಬಂದಿದೇನೆ. ಯಾವಾಗ್ಲೂ ಖುಷಿಯಾಗಿರೋದು, ಸ್ಟ್ರೆಸ್‌ನಲ್ಲಿ ಇರುತ್ತಿರಲಿಲ್ಲ. ಆದ್ರೆ ಯಾಕೆ ಹೀಗಾಯ್ತು ಅನ್ನೋದು ಗೊತ್ತಿಲ್ಲ. ಅವರ ಪತ್ನಿ, ಸಹೋದರರಾದ ಶಿವಣ್ಣ, ರಾಘು ಅವರ ಫ್ಯಾಮಿಲಿಗೆ ಧೈರ್ಯ ಸಿಗಲಿ ಅಂತ ಮಾಳವಿಕಾ ಅವಿನಾಶ್ ತಿಳಿಸಿದ್ದಾರೆ.
ಇದನ್ನೂ ಓದಿ: ಪುನೀತ್ ಮಗಳು ಬರುವುದನ್ನು ನೋಡಿಕೊಂಡು ಅಂತ್ಯಕ್ರಿಯೆ ಬಗ್ಗೆ ತೀರ್ಮಾನ: ಸಿಎಂ