ಬೆಂಗಳೂರು : ರಾಜ್ಯದಲ್ಲಿ ಖಾಲಿ ಇರುವ 56 ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ನೇರ ನೇಮಕಾತಿ ನಡೆಸಲು ಹೈಕೋರ್ಟ್ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಈ ಕುರಿತಂತೆ ಹೈಕೋರ್ಟ್ ಅಧಿಸೂಚನೆ ಹೊರಡಿಸಿದ್ದು, ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮುಂದಿನ ಮೇ 23ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಹತೆ :
- ನೇರ ನೇಮಕಾತಿ ಮೂಲಕ ಆಯ್ಕೆ ಬಯಸುವ ಅಭ್ಯರ್ಥಿಗಳು ಅಂಗೀಕೃತ ವಿವಿಯಿಂದ ಕಾನೂನು ಪದವಿ ಪಡೆದಿರಬೇಕು ಹಾಗೂ ವಕೀಲರಾಗಿ ನೋಂದಾಯಿಸಿಕೊಂಡಿರಬೇಕು.
- ಎಸ್ಸಿ-ಎಸ್ಟಿ ಅಭ್ಯರ್ಥಿಗಳು 38 ವರ್ಷ ಮೀರಿರಬಾರದು. ಸಾಮಾನ್ಯ ವರ್ಗದ ಅಭ್ಯರ್ಥಿಗಳು 35 ವಯೋಮಾನ ದಾಟಿರಬಾರದು.
- ಮಾಜಿ ಸೈನಿಕ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ ಇದೆ. ಇನ್ನು ಸೇವಾನಿರತ ಅಭ್ಯರ್ಥಿಗಳಾಗಿದ್ದಲ್ಲಿ ಎಸ್ಸಿ-ಎಸ್ಟಿ 43 ವರ್ಷ ಹಾಗೂ ಸಾಮಾನ್ಯ ವರ್ಗ 40 ವರ್ಷ ಮೀರಿರಬಾರದು.
- ವೇತನ ಶ್ರೇಣಿ: 27700-770-33090-920-40450-1080-44770 ರೂ.ಇರಲಿದೆ.
ನೇಮಕಾತಿ ವಿಧಾನ :
- ಹೈಕೋರ್ಟ್ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ (ಲಿಖಿತ ಹಾಗೂ ಮೌಖಿಕ) ಪಡೆದ ಅಂಕಗಳ ಆಧಾರದಲ್ಲಿ ನೇರ ನೇಮಕಾತಿ ನಡೆಯಲಿದೆ.
- ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ನಂತರ ಮೌಖಿಕ ಪರೀಕ್ಷೆ ನಡೆಯಲಿದೆ.
ಅನರ್ಹತೆ :
- ಭಾರತೀಯ ಪೌರನಾಗಿಲ್ಲದಿದ್ದರೆ, ನ್ಯಾಯಿಕ ಸೇವೆ, ಸರ್ಕಾರಿ ಸೇವೆ ಅಥವಾ ಶಾಸನಾತ್ಮಕ ಅಥವಾ ಸ್ಥಳೀಯ ಪ್ರಾಧಿಕಾರದ ಸೇವೆಯಿಂದ ಕಡ್ಡಾಯ ನಿವೃತ್ತಿ ಹೊಂದಿದ್ದರೆ, ವಜಾಗೊಂಡಿದ್ದರೆ ಹಾಗೂ ಈ ಮೊದಲು ನ್ಯಾಯಾಂಗ ಅಧಿಕಾರಿಯಾಗಿ ಆಯ್ಕೆಯಾಗಿದ್ದು ಪರಿವೀಕ್ಷಣೆ ಅವಧಿಯಲ್ಲಿ ಸೇವೆಯಿಂದ ವಿಮುಕ್ತಿಗೊಂಡಿದ್ದರೆ ಅನರ್ಹಗೊಳ್ಳಲಿದ್ದಾರೆ.
- ಅಂತೆಯೇ, ನೈತಿಕ ಅಧಃಪತಕ್ಕೆ ಸೇರುವ ಯಾವುದೇ ಅಪರಾಧದಲ್ಲಿ ಶಿಕ್ಷೆಗೆ ಗುರಿಯಾಗಿದ್ದರೆ, ಕೇಂದ್ರ ಅಥವಾ ರಾಜ್ಯ ಲೋಕಸೇವಾ ಆಯೋಗಗಳು ನಡೆಸುವ ಪರೀಕ್ಷೆಗಳಿಗೆ ಶಾಶ್ವತವಾಗಿ ಅನರ್ಹಗೊಂಡಿದ್ದರೆ, ಬಾರ್ ಕೌನ್ಸಿಲ್ ನೋಂದಣಿಯಿಂದ ತೆಗೆದು ಹಾಕಿದ್ದರೆ, ನೇಮಕಾತಿ ಪ್ರಾಧಿಕಾರವನ್ನು ನೇರವಾಗಿ ಅಥವಾ ಪರೋಕ್ಷವಾಗಿ ಪ್ರಭಾವಿಸಿದರೆ ಮತ್ತು ದಿಪತ್ನಿತ್ವ/ದ್ವಿಪತಿತ್ವ ಇದ್ದಲ್ಲಿ ನೇಮಕಾತಿಗೆ ಅನರ್ಹರಾಗಿರುತ್ತಾರೆ.
ಪರೀಕ್ಷಾ ಶುಲ್ಕ:
- ಪೂರ್ವಭಾವಿ ಪರೀಕ್ಷೆಗೆ ಪರಿಶಿಷ್ಟ ಜಾತಿ, ಪಂಗಡ ಹಾಗೂ ಪ್ರವರ್ಗ 1ಕ್ಕೆ ಸೇರಿದ ಅಭ್ಯರ್ಥಿಗಳಿಗೆ 250 ಹಾಗೂ ಇತರೆ ಅಭ್ಯರ್ಥಿಗಳಿಗೆ 500 ರೂ. ಶುಲ್ಕ ನಿಗದಿ ಮಾಡಲಾಗಿದೆ.
- ಪೂರ್ವಭಾವಿ ಪರೀಕ್ಷೆ ಪಾಸಾಗಿ ಮುಖ್ಯ ಪರೀಕ್ಷೆ ಬರೆಯುವ ಮುನ್ನ, ಪರಿಶಿಷ್ಟ ಜಾತಿ, ಪಂಗಡ ಹಾಗೂ ಪ್ರವರ್ಗ 1ಕ್ಕೆ ಸೇರಿದ ಅಭ್ಯರ್ಥಿಗಳು 500 ರೂ.ಹಾಗೂ ಇತರೆ ಅಭ್ಯರ್ಥಿಗಳಿಗೆ 1000 ರೂ. ಶುಲ್ಕ ಪಾವತಿಸಬೇಕಿದೆ. ಅಭ್ಯರ್ಥಿಗಳು ತಪ್ಪು ಅಥವಾ ಸುಳ್ಳು ಮಾಹಿತಿ, ದಾಖಲೆ ಒದಗಿಸಿರುವುದು ಕಂಡು ಬಂದಲ್ಲಿ ಅರ್ಜಿ ತಿರಸ್ಕೃತಗೊಳ್ಳತ್ತದೆ. ಹಾಗೆಯೇ, ಸುಳ್ಳು ಮಾಹಿತಿ ನೀಡಿದ್ದಕ್ಕಾಗಿ ಕ್ರಿಮಿನಲ್ ಪ್ರಾಸಿಕ್ಯೂಷನ್‌ಗೂ ಒಳಪಡಿಸಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಹೈಕೋರ್ಟ್ ವೆಬ್ಸೈಟ್ಗೆ ಭೇಟಿ ನೀಡಬಹುದಾಗಿದೆ.