ಬೆಂಗಳೂರು : ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿರ್ಬಂಧಿಸಿರುವ ಕ್ರಮ ಹಾಗೂ ಈ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ರಿಟ್ ಅರ್ಜಿಗಳ ವಿಚಾರಣೆಯನ್ನು ಪೂರ್ಣಗೊಳಿಸಿರುವ ಹೈಕೋರ್ಟ್ ಪೂರ್ಣ ಪೀಠ ತೀರ್ಪನ್ನು ಕಾಯ್ದಿರಿಸಿದೆ.
ಉಡುಪಿಯ ಸರ್ಕಾರಿ ಬಾಲಕಿಯರ ಪಿಯು ಕಾಲೇಜು ವಿದ್ಯಾರ್ಥಿನಿ ರೇಷಮ್ ಹಾಗೂ ಇತರರು ಸಲ್ಲಿಸಿದ್ದ ರಿಟ್ ಅರ್ಜಿಗಳನ್ನು ಇಂದು (11ನೇ ದಿನ) ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಹಾಗೂ ನ್ಯಾಯಮೂರ್ತಿ ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ಅವರಿದ್ದ ತ್ರಿಸದಸ್ಯ ಪೀಠ, ತೀರ್ಪು ಕಾಯ್ದಿರಿಸಿರುವುದಾಗಿ ತಿಳಿಸಿತು.
ಪುನರಾವರ್ತಿತ ವಾದ ಬೇಡ
ವಿಚಾರಣೆ ಆರಂಭದಲ್ಲಿ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಯೂಸುಫ್ ಮುಚ್ಚಾಲ, ಸರ್ಕಾರ ಹಾಗೂ ಕಾಲೇಜಿನ ಪರ ವಕೀಲರ ವಾದವನ್ನು ಒಪ್ಪಲಾಗದು. ಆತ್ಮಸಾಕ್ಷಿಯ ಆಚರಣೆ ಸ್ವಾತಂತ್ರ್ಯದ ಅಡಿಯಲ್ಲಿ ಹಿಜಾಬ್ ಧರಿಸಲು ಅವಕಾಶವಿದೆ. ಹದೀಸ್‌ನಲ್ಲಿಯೂ ತಲೆ ಮುಚ್ಚುವಂತೆ ಹೇಳಲಾಗಿದೆ. ಹಿಜಾಬ್ ಧರಿಸುವುದು ಕಡ್ಡಾಯ ಆಚರಣೆಯಲ್ಲ ಎಂಬ ಸರ್ಕಾರದ ವಾದ ಸರಿಯಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಈ ವಿಷಯಗಳನ್ನು ಈಗಾಗಲೇ ಪ್ರಸ್ತಾಪಿಸಲಾಗಿದೆ. ಪುನರಾವರ್ತಿತ ವಾದ ಬೇಡ. ನಿಮ್ಮ ವಾದಗಳನ್ನು ಲಿಖಿತವಾಗಿ ಸಲ್ಲಿಸಿ ಎಂದು ಸೂಚಿಸಿತು.
ಸಿಡಿಸಿಯಲ್ಲಿ ಶಾಸಕರ ಆಡಳಿತ
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಪ್ರೊಫೆಸರ್ ರವಿವರ್ಮ ಕುಮಾರ್, ಕಾಲೇಜು ಅಭಿವೃದ್ಧಿ ಸಮಿತಿ (ಸಿಡಿಸಿ) ಶಾಸನಬದ್ಧ ಸಂಸ್ಥೆಯಲ್ಲ. ಸಿಡಿಸಿಗೆ ಸಮವಸ್ತ್ರ ನಿಗದಿ ಮಾಡುವ ಅಧಿಕಾರ ನೀಡಿರುವ ಸರ್ಕಾರದ ಕ್ರಮವೂ ನಿಯಮಬಾಹಿರ. ಸಿಡಿಸಿ ಶಾಸಕರ ಸಮಿತಿಯಂತೆ ಕೆಲಸ ಮಾಡುತ್ತದೆ. ಶಾಸಕರ ಸೂಚನೆಗಳನ್ನು ಪಾಲಿಸುವುದೇ ಸಿಡಿಸಿ ಕೆಲಸ. ಇಂತಹ ಶಾಸಕರ ಸಮಿತಿಗಳಿಗೆ ಕಾಲೇಜಿನ ಆಡಳಿತ ನೀಡುವುದು ಸರಿಯಲ್ಲ ಎಂದರು.
ನ್ಯಾಯಾಲಯಗಳಲ್ಲೂ ಸಮವಸ್ತ್ರ ಇದೆ
ಹಿಜಾಬ್ ವಿವಾದ ಉಲ್ಬಣಗೊಳ್ಳಲು ಮುಸ್ಲಿಂ ಸಂಘಟನೆಗಳ ಪಾತ್ರವಿದೆ. ಈ ನಿಟ್ಟಿನಲ್ಲಿ ಸಿಬಿಐ ಅಥವಾ ಎನ್ಐಎ ತನಿಖೆ ನಡೆಸಲು ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿದಾರರ ಪರ ವಕೀಲ ಸುಭಾಷ್ ಝಾ ವಾದಮಂಡಿಸಿ, 1973ರಿಂದಲೂ ಹಿಜಾಬ್, ಬುರ್ಕಾ, ಗಡ್ಡದ ಕುರಿತಂತೆ ಹಲವು ಕೋರ್ಟ್‌ಗಳು ನಿರ್ಣಯಿಸಿವೆ.
ಮತ್ತೆಷ್ಟು ಕಾಲ ಇದನ್ನೇ ನಿರ್ಣಯಿಸುತ್ತಾ ಕೂರಬೇಕು. ವಕೀಲರಿಗೆ ನಿಗದಿ ಮಾಡಿರುವ ಸಮವಸ್ತ್ರ ಪ್ರಶ್ನಿಸಿ ಹಾಗೂ ಭಾರತೀಯ ಸಂಸ್ಕೃತಿಯಂತೆ ಧೋತಿ-ಕುರ್ತಾ ಬಳಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿತ್ತು. ವಕೀಲರು, ನ್ಯಾಯಮೂರ್ತಿಗಳು ಕೂಡ ಸಮವಸ್ತ್ರ ಧರಿಸುತ್ತಾರೆ. ವಿದ್ಯಾರ್ಥಿಗಳಿಗೇಕೆ ಸಮವಸ್ತ್ರ ಇರಬಾರದು ಎಂದರು.
ಅಲ್ಲದೇ, ಹಿಜಾಬ್ ವಿಚಾರದಲ್ಲಿ ಕೆಲ ಮುಸ್ಲಿಂ ಸಂಘಟನೆಗಳು ನೇರವಾಗಿ ಭಾಗಿಯಾಗಿವೆ. ಈ ಸಂಘಟನೆಗಳಿಗೆ ಸೌದಿಯಿಂದ ಆರ್ಥಿಕ ನೆರವು ನೀಡಲಾಗುತ್ತಿದೆ. ಹೀಗಾಗಿಯೇ, ಹಿಜಾಬ್ ಹೆಸರಲ್ಲಿ ಗಲಭೆಗಳು ನಡೆಯುತ್ತಿವೆ. ಯುವಕ ಹರ್ಷನ ಕೊಲೆ ಹಿಂದೆಯೂ ಸಂಘಟನೆಗಳ ಪಾತ್ರವಿದೆ. ಮುಸ್ಲಿಂ ರಾಷ್ಟ್ರ ಅವರ ಗುರಿ. ಅದಕ್ಕಾಗಿಯೇ ಸಿಬಿಐ-ಎನ್ಐಎ ತನಿಖೆ ನಡೆಸಬೇಕಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಯುವಕನ ಸಾವಿನಲ್ಲಿ ಸಂಘಟನೆಗಳ ಪಾತ್ರ ಇರುವುದನ್ನು ಈಗಲೇ ಊಹಿಸಬೇಡಿ. ತನಿಖೆ ನಡೆಯುತ್ತಿದ್ದು, ಮುಂದೆ ಸತ್ಯಾಂಶ ಹೊರಬರಲಿದೆ ಎಂದಿತು.
ಸೌದಿಯೇ ಮಹಿಳೆಯರ ಸಬಲೀಕರಣಕ್ಕೆ ಮುಂದಾಗಿದೆ
ಇಸ್ಲಾಂ ಧರ್ಮ ಹರಡಿದ್ದೇ ಸೌದಿ ಅರೇಬಿಯಾದಿಂದ. ಅಲ್ಲಿ ಮೊದಲು ಮಹಿಳೆಯರಿಗೆ ಕಾರು ಬೈಕ್‌ಗಳ ಡ್ರೈವಿಂಗ್ಗೆ ಅವಕಾಶವಿರಲಿಲ್ಲ. ಈಗ ಅದೇ ರಾಷ್ಟ್ರ ತನ್ನ ಮಹಿಳೆಯರಿಗೆ ಡ್ರೈವಿಂಗ್ ಲೈಸೆನ್ಸ್ ನೀಡಲು ಮುಂದಾಗಿದೆ. ಲಕ್ಷಾಂತರ ಮಹಿಳೆಯರು ಲೈಸೆನ್ಸ್ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಅಷ್ಟರಮಟ್ಟಿಗೆ ಸೌದಿ ಕೂಡ ಮಹಿಳಾ ಸಬಲೀಕರಣಕ್ಕೆ ಮುಂದಾಗಿದೆ. ಇಲ್ಲಿನ್ನೂ ಮುಖಮುಚ್ಚಿ ಓಡಾಡಬೇಕೇ ಎಂದರು.