ಬೆಂಗಳೂರು: ಬೇರೆ ಇಲಾಖೆಗಳಲ್ಲೂ ಕ್ರೀಡಾ ಪಟುಗಳಿಗೆ ಉದ್ಯೋಗದಲ್ಲಿ ಶೇ.2ರಷ್ಟು ಮೀಸಲಾತಿ ನೀಡುವ ಬಗ್ಗೆ ಶೀಘ್ರ ಆದೇಶ ಹೊರಡಿಸುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಕ್ರೀಡಾಪಟುಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ.
ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಭಾಗವಹಿಸಿ ಪದಕ ಪಡೆದ ಕರ್ನಾಟಕದ ಕ್ರೀಡಾ ಪಟುಗಳಿಗೆ ಹಾಗೂ ಅಮೃತ ಕ್ರೀಡಾ ದತ್ತು ಯೋಜನೆಯಡಿಯಲ್ಲಿ ಆಯ್ಕೆಯಾಗಿರುವ 75 ಕ್ರೀಡಾಪಟುಗಳಿಗೆ ಅಭಿನಂದನಾ ಕಾರ್ಯಕ್ರಮವನ್ನು ವಿಧಾನಸೌಧದಲ್ಲಿ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಆಯೋಜಿಸಲಾಗಿತ್ತು. ಬೇರೆ ಇಲಾಖೆಗಳಲ್ಲೂ ಕ್ರೀಡಾ ಪಟುಗಳಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವ ಕಡತ ನನ್ನ ಬಳಿ ಇದೆ. ಆ ಕಡತಕ್ಕೆ ಶೀಘ್ರದಲ್ಲೇ ಸಹಿ ಹಾಕಿ ಆದೇಶ ಹೊರಡಿಸುತ್ತೇನೆ ಎಂದು ತಿಳಿಸಿದರು.
ಕ್ಯಾರೆಕ್ಟರ್ ಬಿಲ್ಡ್ ಮಾಡಿಕೊಳ್ಳಿ: ಕ್ರೀಡಾಪಟುಗಳಿಗೆ ಕ್ರೀಡಾ ಮನೋಭಾವ ಇರಬೇಕು ಅಂತಾರೆ. ಪ್ಲೇ ಹಾರ್ಡ್ ಟು ವಿನ್, ಪ್ಲೇ ಟು ದಿ ರೂಲ್ಸ್ ಆ್ಯಂಡ್ ಡೋಂಡ್ ಪ್ಲೇ ಪಾರ್ ಟು ಲೂಸ್. ಈ ಮನೋಭಾವದಿಂದ ನೀವು ಪದಕ ಗೆಲ್ಲುತ್ತೀರಿ. ಕ್ರೀಡಾ ಮನೋಭಾವದಿಂದ ಶಿಸ್ತು, ಹೆಚ್ಚು ಸಾಧಿಸುವ ಇಚ್ಛಾ ಶಕ್ತಿ ಬರುತ್ತದೆ. ಶಿಸ್ತಿನಿಂದ ನಿಮಗೆ ಕ್ಯಾರೆಕ್ಟರ್ ಬಿಲ್ಡ್ ಆಗುತ್ತದೆ. ಇದು ಬಹಳ ಮುಖ್ಯ. ಚಾರಿತ್ರ್ಯ ಬೆಳೆಸಿಕೊಳ್ಳಲು ನೀವೆಲ್ಲರೂ ಯತ್ನಿಸಬೇಕು. ಆಗ ನೀವು ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಸಿಎಂ ಬೊಮ್ಮಾಯಿ ಸಲಹೆ ನೀಡಿದರು.
ನೌಕರಿಗಾಗಿ ಕ್ರೀಡೆ ಆಡಬೇಡಿ. ನೀವು ಮೊದಲಿಗೆ ದೇಶಕ್ಕಾಗಿ ಆಡಿ. ಗೆಲ್ಲೋದಕ್ಕಾಗಿ ಆಡಿ. ಸರ್ಕಾರ ನಿಮ್ಮ ಬೆನ್ನಿಗೆ ನಿಂತಿದೆ. ನಿಮ್ಮ ಸುರಕ್ಷತೆ ನೋಡುತ್ತದೆ. ನಿಮಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಅಭಯ ನೀಡಿದರು.
ಇದನ್ನೂ ಓದಿ: ಸಚಿವ ಜೆ.ಸಿ. ಮಾಧುಸ್ವಾಮಿ ಬೇರೆ ಅರ್ಥದಲ್ಲಿ ಹೇಳಿದ್ದಾರೆ: ಸಿಎಂ ಬೊಮ್ಮಾಯಿ ಸ್ಪಷ್ಟನೆ
ಇದಕ್ಕೂ ಮುಂಚೆ ಮಾತನಾಡಿದ ಕಾಮನ್ ವೆಲ್ತ್ ಪದಕವಿಜೇತ ಗುರುರಾಜ್ ಪೂಜಾರಿ, ಕರ್ನಾಟಕದ ಕ್ರೀಡಾಪಟುಗಳಿಗೆ ಸರ್ಕಾರದ ಬೆಂಬಲ ಸಿಕ್ಕರೆ ಪದಕಗಳು ಇನ್ನೂ ಜಾಸ್ತಿ ಬರುತ್ತದೆ. ಈ ಬಾರಿಯ ಕಾಮನ್ ವೆಲ್ತ್ ಗೇಮ್ಸ್ನಲ್ಲಿ ರಾಜ್ಯಕ್ಕೆ ಮೂರು ಪದಕ ಬಂದಿವೆ. ಬೇರೆ ರಾಜ್ಯಗಳಲ್ಲಿ ಕ್ರೀಡಾಪಟುಗಳ ಪ್ರೊತ್ಸಾಹ ಧನ ಜಾಸ್ತಿ ಇದೆ. ಪ್ರೋತ್ಸಾಹ ಧನ ಹೆಚ್ಚಿಸಬೇಕು. ಆಗ ಪದಕ ಗೆಲ್ಲುವ ಅವಕಾಶ ಹೆಚ್ಚಾಗುತ್ತದೆ. ಕ್ರೀಡಾ ಪಟುಗಳಿಗೆ ಸರ್ಕಾರಿ ಉದ್ಯೋಗ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರು. ಇತರ ಕ್ರೀಡಾ ಪಟುಗಳೂ ಸರ್ಕಾರಿ ಉದ್ಯೋಗ ಕಲ್ಪಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದರು.
ಇದೇ ವೇಳೆ ಮಾತನಾಡಿದ ಕರ್ನಾಟಕ ಒಲಿಂಪಿಕ್ಸ್ ಒಕ್ಕೂಟದ ಅಧ್ಯಕ್ಷ ಗೋವಿಂದ ರಾಜ್, ಈಗಾಗಲೇ ಪೊಲೀಸ್ ಇಲಾಖೆ, ಅರಣ್ಯ ಇಲಾಜಖೆಯ ನೇರ ನೇಮಕಾತಿಯಲ್ಲಿ ಕ್ರೀಡಾ ಪಟುಗಳಿಗೆ 2% ಅವಕಾಶ ಇದೆ. ಅದನ್ನು ಬಳಕೆ ಮಾಡಿಕೊಳ್ಳುವಂತೆ ಕರೆ ನೀಡಿದರು. ಕೆಪಿಎಸ್ಸಿ ನೇಮಕಾತಿಯಲ್ಲಿ 1% ಮೀಸಲಾತಿ ನೀಡುವಂತೆ ಮನವಿ ಮಾಡಿದರು.