ಇಸ್ಲಾಮಾಬಾದ್: ಪಾಕಿಸ್ತಾನದ ಆಡಳಿತಾರೂಢ ಇಮ್ರಾನ್ ಖಾನ್ ಸರ್ಕಾರ ತನ್ನ ಅಧಿಕಾರ ಅವಧಿಯ ಮೊದಲ ವರ್ಷದಲ್ಲಿ ಹಣ ಎರವಲು ಪಡೆಯುವಲ್ಲಿ ಈ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದಿದೆ.
ಅಧಿಕೃತ ಮಾಹಿತಿಯ ಪ್ರಕಾರ, ಪ್ರಸ್ತುತ ಪಾಕ್ ಸರ್ಕಾರವು ಒಂದು ವರ್ಷದ ಆಡಳಿತದಲ್ಲಿ ದೇಶದ ಒಟ್ಟು ಸಾಲದ ಪ್ರಮಾಣದಲ್ಲಿ 7,509 ಬಿಲಿಯನ್ ರೂ.ಯಷ್ಟು (ಪಾಕಿಸ್ತಾನಿ ಕರೆನ್ಸಿ) ಹೆಚ್ಚಳವಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ, ಪ್ರಧಾನ ಮಂತ್ರಿಗಳ ಕಚೇರಿಗೆ ಸಾಲದ ದತ್ತಾಂಶಗಳನ್ನು ಮಾಹಿತಿ ಕಳುಹಿಸಿದೆ ಎಂದು ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
2018ರ ಆಗಸ್ಟ್ ಮತ್ತು 2019ರ ಆಗಸ್ಟ್ ನಡುವೆ ಪಾಕ್ ಸರ್ಕಾರವು ವಿದೇಶಿ ಮೂಲಗಳಿಂದ 2,804 ಬಿಲಿಯನ್ ರೂ. ಮತ್ತು ದೇಶಿಯ ಮೂಲಗಳಿಂದ 4,705 ಬಿಲಿಯನ್ ರೂ. ಎರವಲು ಪಡೆದಿದೆ ಎಂದು ವರದಿ ತಿಳಿಸಿದೆ.
ಸ್ಟೇಟ್ ಬ್ಯಾಂಕ್ ಅಂಕಿ ಅಂಶಗಳ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದ ಮೊದಲ ಎರಡು ತಿಂಗಳಲ್ಲಿ ಪಾಕಿಸ್ತಾನದ ಸಾರ್ವಜನಿಕ ಸಾಲದಲ್ಲಿ ಶೇ 1.43ರಷ್ಟು ಏರಿಕೆ ಕಂಡುಬಂದಿದೆ. ಫೆಡರಲ್ ಸರ್ಕಾರದ ಸಾಲವು 32,240 ಬಿಲಿಯನ್ ರೂ.ಗಳಿಗೆ ತಲುಪಿದೆ. ಇದು ಕಳೆದ ವರ್ಷದ ಆಗಸ್ಟ್ನಲ್ಲಿ 24,732 ಬಿಲಿಯನ್ ರೂ.ಯಷ್ಟಿತ್ತು.