ನವದೆಹಲಿ: ನಿರೀಕ್ಷಿತ ಪ್ರಮಾಣದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹ ಆಗದ ಕಾರಣ ಈಗಿನ ತೆರಿಗೆ ಸ್ಲ್ಯಾಬ್ ದರಗಳು ಹೆಚ್ಚಳವಾಗುವ ಸಾಧ್ಯತೆ ಇದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ನೇತೃತ್ವದಲ್ಲಿ ಡಿಸೆಂಬರ್ 18ರಂದು ನಡೆಯಲಿರುವ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ತೆರಿಗೆ ದರ ಹೆಚ್ಚಳದ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ. ಜಿಎಸ್‌ಟಿ ಸಂಗ್ರಹವು ನಿರೀಕ್ಷಿಗಿಂತ ಕಡಿಮೆ ಆಗಿರುವುದು ಹಾಗೂ ರಾಜ್ಯಗಳಿಗೆ ನೀಡುವ ಪರಿಹಾರ ಬಾಕಿ ಇರುವುದರಿಂದ ದರ ಹೆಚ್ಚಳಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.
ಪ್ರಸ್ತುತ ಜಿಎಸ್‌ಟಿ ಸ್ಲ್ಯಾಬ್ಗಳು ಶೇ 5. ಶೇ 12, ಶೇ 18 ಹಾಗೂ ಶೇ 28 ಹಂತಗಳಲಿವೆ. ಶೇ 28ರ ಸ್ಲ್ಯಾಬ್ಗೆ ಒಳಪಟ್ಟ ಸರಕು ಮತ್ತು ಸೇವೆಗಳಿಗೆ ಶೇ 1 ರಿಂದ ಶೇ 25ರಷ್ಟು ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತಿದೆ. ಜಿಎಸ್‌ಟಿ ಸ್ಲ್ಯಾಬ್ಗಳನ್ನು ಶೇ 5 ರಿಂದ ಶೇ 8ಕ್ಕೆ ಮತ್ತು ಶೇ 12ರಿಂದ ಶೇ 15ಕ್ಕೆ ಹೆಚ್ಚಿಸುವುದರ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.
ತೆರಿಗೆ ಹಂತಗಳನ್ನು ಪ್ರಸ್ತುತದಲ್ಲಿರುವ ನಾಲ್ಕರ ಬದಲಿಗೆ ಮೂರಕ್ಕೆ ಇಳಿಸುವ ಬಗ್ಗೆಯೂ ಇತ್ತೀಚೆಗೆ ನಡೆದ ಸಭೆಯಲ್ಲಿ ಚರ್ಚಿಸಲಾಗಿದೆ. ವಿನಾಯ್ತಿ ಪಟ್ಟಿ ಬದಲಿಸುವ ಮತ್ತು ಕೆಲವು ಸೇವೆಗಳ ಮೇಲೆ ಸೆಸ್ ವಿಧಿಸುವ ಸಾಧ್ಯತೆ ಸಹ ಇದೆ. ರಾಜ್ಯಗಳಿಗೆ ನೀಡುವ ಪರಿಹಾರ ಭರಿಸಲು ಕೆಲ ಸರಕುಗಳ ಮೇಲಿನ ಸೆಸ್ ಹೆಚ್ಚಿಸುವುದು ಜಿಎಸ್‌ಟಿ ಮಂಡಳಿಯ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.