ಹೈದರಾಬಾದ್(ತೆಲಂಗಾಣ): ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಪರಿಶಿಷ್ಟ ಪಂಗಡದವರಿಗೆ(ಎಸ್‌ಟಿ) ಶೇ.10 ರಷ್ಟು ಮೀಸಲಾತಿ ಹೆಚ್ಚಿಸಿ ತೆಲಂಗಾಣ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ.
ಪ್ರಸ್ತುತ ರಾಜ್ಯದಲ್ಲಿ ಎಸ್‌ಟಿ ಸಮುದಾಯಕ್ಕೆ ಶೇ 6ರಷ್ಟು ಮೀಸಲಾತಿ ಇದೆ. ಇತ್ತೀಚಿಗೆ ನಡೆದ ಸಾರ್ವಜನಿಕ ಸಭೆಯಲ್ಲಿ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರು ತಮ್ಮ ಸರ್ಕಾರವು ಸರ್ಕಾರಿ ಹುದ್ದೆಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಎಸ್‌ಟಿ ಸಮುದಾಯಕ್ಕೆ ಶೇ.10 ರಷ್ಟು ಮೀಸಲಾತಿ ಕಲ್ಪಿಸಲಾಗುವುದು ಎಂದು ತಿಳಿಸಿದ್ದರು. ಅದರಂತೆ ಶನಿವಾರ ಅಧಿಕೃತ ಆದೇಶ ಹೊರಡಿಸಲಾಗಿದೆ.
ರಾಷ್ಟ್ರಪತಿಯಿಂದ ಸಿಗದ ಅಂಕಿತ: ಪರಿಶಿಷ್ಟ ಪಂಗಡಕ್ಕೆ ಶೇ.6 ರಿಂದ ಶೇ.10ರಷ್ಟು ಮೀಸಲಾತಿ ನೀಡುವ ಮಸೂದೆಯನ್ನು 2017 ರಲ್ಲಿ ತೆಲಂಗಾಣ ವಿಧಾನಸಭೆಯಲ್ಲಿ ಮಂಡಿಸಿ ಅಂಗೀಕಾರ ಪಡೆದುಕೊಳ್ಳಲಾಗಿತ್ತು. ಬಳಿಕ ಅದು ರಾಷ್ಟ್ರಪತಿಗಳ ಒಪ್ಪಿಗೆ ಪಡೆಯಲು ಕೇಂದ್ರಕ್ಕೆ ಕಳುಹಿಸಲಾಗಿತ್ತು. 6 ವರ್ಷ ಕಳೆದರೂ ಮಸೂದೆಗೆ ರಾಷ್ಟ್ರಪತಿಗಳ ಅಂಕಿತ ಸಿಕ್ಕಿಲ್ಲ. ಹೀಗಾಗಿ ಸರ್ಕಾರವೇ ನಿರ್ಧರಿಸಿ ಮೀಸಲಾತಿ ನೀಡುವ ಆದೇಶವನ್ನು ಹೊರಡಿಸಿದೆ.